ಬೆಳಗಾವಿ :ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಅಂತಿಮ ಸೆಮಿಸ್ಟರ ಎಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ 10 ನಿಮಿಷದೊಳಗೆ ಫಲಿತಾಂಶ ಪ್ರಕಟಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.
ಬಿ.ಇ. ಮತ್ತು ಬಿ.ಟೆಕ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ 56,192 ವಿದ್ಯಾರ್ಥಿಗಳು ಹಾಜರಾಗಿದ್ದರು. ಶುಕ್ರವಾರ ಸಂಜೆ 5.30ಕ್ಕೆ ಪರೀಕ್ಷೆ ಅಂತ್ಯವಾಗಿದ್ದು, 5.40ಕ್ಕೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಶೇಕಡ 99.98 ಫಲಿತಾಂಶ ಸಾಧಿಸಿದೆ.ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ, ಸಂಪೂರ್ಣ ಮೌಲ್ಯಮಾಪನ ಪ್ರಕ್ರಿಯೆಯನ್ನು 8 ದಿನಗಳ ಮುಂಚಿತವಾಗಿಯೇ ಮುಗಿಸಿದೆ. ಆ ಮೂಲಕ ಈ ಹಿಂದೆ ದಾಖಲೆಗಳನ್ನು ಮುರಿದಿದೆ. ಈ ಹಿಂದೆ ಪರೀಕ್ಷೆ ಮುಗಿದ ಒಂದು ಗಂಟೆಯೊಳಗೆ ಫಲಿತಾಂಶವನ್ನು ಪ್ರಕಟಿಸಿತ್ತು. ಫಲಿತಾಂಶವನ್ನು ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ನೇರವಾಗಿ ಕಳುಹಿಸಲಾಗಿದೆ.
ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ಮಾತನಾಡಿ,ವಿಟಿಯು ತಂತ್ರಜ್ಞಾನ ಅಳವಡಿಕೆಯಲ್ಲಿ ಸದಾ ಮುಂದಿದೆ. ವಿದ್ಯಾರ್ಥಿಗಳ ಸ್ನೆಹಿಯಾಗಿದೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ. ಪರೀಕ್ಷೆ ಮುಗಿದ ಕೇವಲ 10 ನಿಮಿಷದಲ್ಲಿ ಫಲಿತಾಂಶ ನೀಡುವುದು ಸುಲಭದ ವಿಷಯವಲ್ಲ. ಇದಕ್ಕೆ ಸಹಕಾರ ನೀಡಿದ ವಿಟಿಯು ಆಡಳಿತ ಸಿಬ್ಬಂದಿ, ಪರೀಕ್ಷಾ ವಿಭಾಗದ ಸಿಬ್ಬಂದಿ ಮತ್ತು ಸಂಯೋಜಿತ ಕಾಲೇಜುಗಳ ಸಿಬ್ಬಂದಿಗೆ ಅಭಿನಂದನೆ ತಿಳಿಸುತ್ತೇನೆ. ಅಂತಿಮ ವರ್ಷದ ವಿದ್ಯಾರ್ಥಿಗಳು ಉದ್ಯೋಗ ಮತ್ತು ಉನ್ನತ ಶಿಕ್ಷಣ ಪಡೆಯಲು ಫಲಿತಾಂಶದ ನಿರೀಕ್ಷೆಯಲ್ಲಿರುತ್ತಾರೆ. ಹೀಗಾಗಿ ನಾವು ಶೀಘ್ರವಾಗಿ ಫಲಿತಾಂಶ ನೀಡಿದ್ದೇವೆ ಎಂದರು.
2025 ಮೇ ನಲ್ಲಿ ನಡೆದ 2021ರ ಬ್ಯಾಚ್‌ನ 50,321 ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ ಒಂದು ಗಂಟೆಯೊಳಗೆ ಫಲಿತಾಂಶವನ್ನು ಪ್ರಕಟಿಸಿತ್ತು.2024 ಮೇ ನಲ್ಲಿ ನಡೆದ 2020ರ ಬ್ಯಾಚ್‌ನ 37,011 ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ 3 ಗಂಟೆಯಲ್ಲಿ ಪ್ರಕಟಿಸಿತ್ತು. 2023ರಲ್ಲಿ ನಡೆದ 2019ರ ಬ್ಯಾಚ್‌ನ ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ ಎರಡನೇ ದಿನಗಳಲ್ಲಿ ನೀಡಿತ್ತು. ಆ ವೇಳೆ 43,662 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು ಎಂದು ವಿವರಿಸಿದರು.
ವಿಟಿಯು ಕುಲಸಚಿವ (ಮೌಲ್ಯಮಾಪನ) ಪ್ರೊ.ಯು.ಜೆ.ಉಜ್ವಲ್ ಮಾತನಾಡಿ, ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಮೌಲ್ಯಮಾಪನ ಮಾಡಲಿದ್ದು, ಫಲಿತಾಂಶವನ್ನು ಶೀಘ್ರವಾಗಿ ಪ್ರಕಟಿಸಲು ಸಿದ್ಧತೆ ನಡೆಸಲಾಗಿತ್ತು. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.