ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದ ಸತೀಶ ಮಾನಗಾಂವಿ ಕುಟುಂಬದೊಂದಿಗೆ ಅಧಿಕಾರಿ ಮಹಾಂತೇಶ ಹಿರೇಮಠ, ಬಸವರಾಜ ಧೂಶಿ ಇತರರಿದ್ದರು.
ದಡ್ಡಿ: ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದ ಯುವಕ ಸತೀಶ ಮಲ್ಲಿಕಾರ್ಜುನ ಮಾನಗಾಂವಿಯನ್ನು ಜೀತದಿಂದ ಮುಕ್ತಗೊಳಿಸಿ ರಕ್ಷಿಸಲಾಗಿದೆ.
ಕೆಲಸ ಹುಡುಕಿಕೊಂಡು ಹಾಸನಕ್ಕೆ ಹೋಗಿದ್ದ ಯುವಕನಿಗೆ ಕೂಲಿ ನೀಡದೆ, ಕೂಡಿಹಾಕಿ ಜೀತಕ್ಕೆ ಇರಿಸಿಕೊಳ್ಳಲಾಗಿತ್ತು. ಯುವಕನ ಕುಟುಂಬದವರು ಮತ್ತು ಸಾಮಾಜಿಕ ಕಾರ್ಯಕರ್ತರ ದೂರಿನ ಮೇರೆಗೆ ಹಾಸನ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಜೀತದಿಂದ ಮುಕ್ತಗೊಳಿಸಿ, ಬೆಳಗಾವಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರು. ಜೀತಕ್ಕಿಟ್ಟುಕೊಂಡಿದ್ದವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸತೀಶನನ್ನು ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಗಿದೆ.
ಯುವಕನಿಗೆ ಸರ್ಕಾರದಿಂದ ಸಿಗುವ ಪುನರ್ವಸತಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಕಾರ್ಮಿಕ ಇಲಾಖೆ ಅಧಿಕಾರಿ ಮಹಾಂತೇಶ ಹಿರೇಮಠ, ಇಸ್ಲಾಂಪುರ ಗ್ರಾಮ ಆಡಳಿತ ಅಧಿಕಾರಿ ಬಸವರಾಜ ಧೂಶಿ ಕಾರ್ಯಾಚರಣೆಗೆ ಸಹಕರಿಸಿದ್ದಾರೆ.