ಬೆಳಗಾವಿ ಆಟೋ ನಗರ ಕೈಗಾರಿಕಾ ಪ್ರದೇಶದ ಆಸ್ತಿಗಳಿಗೆ ಇ-ಆಸ್ತಿ ಹಾಗೂ ಬಿ-ಖಾತೆ ನೀಡುವಂತೆ ಆಗ್ರಹಿಸಿ ಕರುನಾಡ ವಿಜಯ ಸೇನೆಯಿಂದ ಸೋಮವಾರ ಪಾಲಿಕೆ ಎದುರು ಪ್ರತಿಭಟಿಸಲಾಯಿತು.
ಬೆಳಗಾವಿ: ಆಟೋ ನಗರ ಕೈಗಾರಿಕಾ ಪ್ರದೇಶದ ಆಸ್ತಿಗಳಿಗೆ ಇ-ಆಸ್ತಿ ಹಾಗೂ ಬಿ-ಖಾತೆ ನೀಡುವಲ್ಲಿ ಆಗುತ್ತಿರುವ ವಿಳಂಬ ಧೋರಣೆ ಖಂಡಿಸಿ ಕರುನಾಡ ವಿಜಯ ಸೇನೆಯಿಂದ ಸೋಮವಾರ ಮಹಾನಗರ ಪಾಲಿಕೆ ಎದುರು ಪ್ರತಿಭಟಿಸಲಾಯಿತು.
ಸಣ್ಣ ಕೈಗಾರಿಕಾ ಪ್ರದೇಶವಾಗಿರುವ ಅಟೋ ನಗರದಲ್ಲಿನ ಕೆಐಎಡಿಬಿ ಸಂಬಂಧಿಸಿದ ಜಾಗೆಗಳಿಗೆ ಈವರೆಗೂ ಇ-ಆಸ್ತಿ ಮತ್ತು ಬಿ-ಖಾತೆ ನೀಡುವ ಪ್ರಕ್ರಿಯೆ ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡಿದೆ. ಈ ಬಗ್ಗೆ ಉದ್ಯಮಿದಾರರು, ಕಾರ್ಮಿಕರು, ಆಸ್ತಿ ಮಾಲೀಕರು ಅನೇಕ ಸಲ ಲಿಖಿತ ಮನವಿ ಪಾಲಿಕೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇದರಿಂದ ಉದ್ಯಮಿದಾರರಿಗೆ ಸಾಲ ಸೌಲಭ್ಯ ಸಿಗುತ್ತಿಲ್ಲ. ಆಸ್ತಿ ಮಾರಾಟ, ಖರೀದಿ, ಹಸ್ತಾಂತರಕ್ಕೆ ತಡೆಯಾಗಿದೆ. ಈ ಬಗ್ಗೆ ಕೆಐಎಡಿಬಿಗೆ ಕೇಳಿದಾಗ, ಈಗಾಗಲೇ ತಾವು ಪಾಲಿಕೆಗೆ ಈ ಸಂಬಂಧ ಪತ್ರ ಬರೆದಿರುವುದಾಗಿಯೂ ತಿಳಿಸಿದ್ದಾರೆ. ಆದರೂ ನಿರ್ಲಕ್ಷೃ ವಹಿಸಿರುವ ಪಾಲಿಕೆ, ಸಕಾಲ ಸೇವಾ ಖಾತರಿ ಕಾಯ್ದೆ 2011ನ್ನು ಉಲ್ಲಂಘಿಸುತ್ತಿದ್ದು, 8 ದಿನಗಳೊಳಗೆ ಕ್ರಮ ಕೈಘೊಳ್ಳಬೇಕು. ಇಲ್ಲದೇ ಹೋದಲ್ಲಿ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುರೇಶ ಇಟಗಿ, ರವಿ ಭದ್ರಕಾಳಿ, ಅಕ್ಷಯ ಭದ್ರಕಾಳಿ, ಆನಂದ ಕೋಟಗಿ, ವಿಜಯ ಅವಟಿ, ಕಸ್ತೂರಿ ಬಾವಿ ಇತರರಿದ್ದರು.