ಸರ್ಕಾರಿ ಆಸ್ಪತ್ರೆಗೆ ವೈದ್ಯರು ಮತ್ತು ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ವಿವಿಧ ಸಮುದಾಯದ ಜನರು ನಿಪ್ಪಾಣಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದರು. ಗನು ಗೋಸಾವಿ, ಪ್ರೊ.ಅಚ್ಯುತ ಮಾನೆ, ಅರೇಶ ಸನದಿ, ಬಾನುಬಾಯಿ ಗೋಸಾವಿ, ತಾರಾಬಾಯಿ ಗೋಸಾವಿ ಇತರರಿದ್ದರು. 
ಬೆಳಗಾವಿ

ವೈದ್ಯರ ನೇಮಕ ಮಾಡಲು ಮನವಿ

ರಾಘವೇಂದ್ರಗೌಡ ಭೀ ಪಾಟೀಲ್
ನಿಪ್ಪಾಣಿ: ನಗರದ ಮಹಾತ್ಮ ಗಾಂಧಿ ಸಮುದಾಯ ಆಸ್ಪತ್ರೆಯಲ್ಲಿ ಮೂಳೆಚಿಕಿತ್ಸೆ ಮತ್ತು ಸ್ತ್ರೀರೋಗ ತಜ್ಞರು ವರ್ಗಾವಣೆಗೊಂಡು ವರ್ಷ ಕಳೆದರೂ, ವೈದ್ಯರನ್ನು ನೇಮಿಸಿಲ್ಲ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಮರ್ಪಕ ವೈದ್ಯರಿಲ್ಲದೆ ರೋಗಿಗಳಿಗೆ ತೊಂದರೆಯಾಗುತ್ತಿದೆ ಕೂಡಲೇ ವೈದ್ಯರನ್ನು ನೇಮಿಸಬೇಕು ಎಂದು ಗೋಸಾವಿ ಸಮುದಾಯದ ಮುಖಂಡ ಗನು ಗೋಸಾವಿ ಆಗ್ರಹಿಸಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಅಲೆಮಾರಿ, ಪರಿಶಿಷ್ಟ ಪಂಗಡ, ಗೋಸಾವಿ, ದುಂಗರಿ, ಗರಾಸಿಯಾ ಸಮುದಾಯದ ವತಿಯಿಂದ ಈಚೆಗೆ ಪ್ರತಿಭಟಿಸಿ ಮಾತನಾಡಿ, ವೈದ್ಯರ ಕೊರತೆಯಿಂದ ರೋಗಿಗಳು ಅಲೆದಾಡುವ ಪರಿಸ್ಥಿತಿ ಇದೆ.
ಬಹಳಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ಸೌಲಭ್ಯ ಸಿಗುತ್ತಿಲ್ಲ. ಕೂಡಲೇ ಸಮಸ್ಯೆ ಸರಿಪಡಿಸದಿದ್ದಲ್ಲಿ ಸುವರ್ಣ ವಿಧಾನಸೌಧದ ಎದುರು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಪ್ರೊ.ಅಚ್ಯುತ ಮಾನೆ ಮಾತನಾಡಿ, ಆಸ್ಪತ್ರೆಗಳಲ್ಲಿ ಕೂಡಲೇ ಸೌಲಭ್ಯ ಒದಗಿಸಿ ವೈದ್ಯರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಸುರೇಶ ಮುಂಜೆ ಮಾತನಾಡಿ, ಮೇಲಧಿಕಾರಿಗೆ ಮನವಿ ತಲುಪಿಸಿ ಅಗತ್ಯ ಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಅರೇಶ ಸನದಿ, ಅಣ್ಣಾಸಾಹೇಬ ಕುರಾಡೆ, ಲೋಕೇಶ ಘಸ್ತೆ, ಮಹೇಶ ಸೂರ್ಯವಂಶಿ, ಪಿಂಟು ಮಾನೆ, ವಿಶ್ವನಾಥ ಜಾಧವ, ವಿಜಯ ಗೋಸಾವಿ, ಸಂದೀಪ ಮಾನೆ, ಬಾನುಬಾಯಿ ಗೋಸಾವಿ, ತಾರಾಬಾಯಿ ಗೋಸಾವಿ ಇತರರು ಇದ್ದರು.