ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಬುಧವಾರ ಅನಧಿಕೃತ ಜಾಹಿರಾತು ಫಲಕಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು.
ಬೆಳಗಾವಿ :ಇಲ್ಲಿನ ಮಹಾನಗರದ ಪ್ರಮುಖ ವೃತ್ತ, ಮುಖ್ಯ ರಸ್ತೆ ಸೇರಿ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ಹಾಕಲಾಗಿದ್ದ ಅನಧಿಕೃತ ಜಾಹಿರಾತು ನಾಮಫಲಕಗಳನ್ನು ಪಾಲಿಕೆ ಅಧಿಕಾರಿ, ಸಿಬ್ಬಂದಿ ತೆರವುಗೊಳಿಸುವ ಮೂಲಕ ಅಕ್ರಮದಾರರಿಗೆ ಬಿಸಿ ಮುಟ್ಟಿಸಿದೆ.
ನಗರದ ಚನ್ನಮ್ಮ ವೃತ್ತ, ಕೃಷ್ಣದೇವರಾಯ ವೃತ್ತ, ಬಸವೇಶ್ವರ ವೃತ್ತ, ಮಾರುಕಟ್ಟೆ ಪ್ರದೇಶ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಹಾನಗರ ಪಾಲಿಕೆ ವತಿಯಿಂದ ಪರವಾನಗಿ ಪಡೆದುಕೊಳ್ಳದೆ ಬೇಕಾಬಿಟ್ಟಿಯಾಗಿ ಅಳವಡಿಸಿರುವ ಜಾಹಿರಾತು ಫಲಕಗಳನ್ನು ಬುಧವಾರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ನೇತೃತ್ವದಲ್ಲಿ ಅಧಿಕಾರಿ ತಂಡ ತೆರವು ಕಾರ್ಯಾಚರಣೆ ನಡೆಸುವ ಮೂಲಕ ಬಿಸಿ ಮುಟ್ಟಿಸಿತು.
ಪಾಲಿಕೆ ಜಾಹಿರಾತು ವಿಭಾಗದಿಂದ ವಾರ್ಷಿಕ 1 ರಿಂದ 2 ಕೋಟಿ ರೂ. ತೆರಿಗೆ ನಷ್ಟವಾಗಿದೆ. ಅಲ್ಲದೆ, ಜಾಹಿರಾತು ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಪಾಲಿಕೆ ಆದಾಯ ಕಟ್ಟದೆ ಪಾಲಿಕೆ ಗುರುತಿಸಿರುವ ಸ್ಥಳಗಳಲ್ಲಿ ಅಕ್ರಮವಾಗಿ ಜಾಹಿರಾತು ಫಲಕ ಅಳವಡಿಸಿದ್ದಾರೆ. ಕೂಡಲೇ ಜಾಹಿರಾತು ಬೋರ್ಡ್‌ಗಳನ್ನು ತೆರವುಗೊಳಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಲಿಕೆ ಸ್ಥಾಯಿ ಸಮಿತಿ ಸಭೆಗಳಲ್ಲಿ ಸದಸ್ಯರು ಆಗ್ರಹಿಸಿದರು.
ಈಗಾಗಲೇ ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಜಾಹಿರಾತು ಬೋರ್ಡ್‌ಗಳನ್ನು ತೆರವುಗೊಳಿಸುವಂತೆ ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಲಾಗಿತ್ತು.ಆದರೆ, ಯಾರು ತೆರವು ಮಾಡಿಕೊಂಡಿರಲಿಲ್ಲ. ಈ ಹಿನ್ನೆಲೆ ನಗರಾದ್ಯಂತ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ದಂಡ ಸಮೇತ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತ ಕಾರ್ತಿಕ್ ಎಂ. ತಿಳಿಸಿದ್ದಾರೆ.