ಬೆಳಗಾವಿಯಲ್ಲಿ ಗುರುವಾರ ಮಲ್ಲಿಕಾರ್ಜುನ ಕಡಕೋಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜಪ್ರಭು ಧೋತ್ರೆ, ಏಣಗಿ ಸುಭಾಸ, ಎನ್.ನಟರಾಜ ಇದ್ದಾರೆ.
ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣದಿಂದ ಆಯೋಜಿಸಿದ್ದ ಅಭಿನಯ ಸಮೇತ ರಂಗ ಸಂಗೀತ ಮಹಿಳಾ ತರಬೇತಿ ಕಾರ್ಯಾಗಾರದ ಸಮಾರೋಪ ಪ್ರಯುಕ್ತ ಆ.8ರಂದು ಸಂಜೆ 6ಕ್ಕೆ ಕನ್ನಡ ಭವನದಲ್ಲಿ ಶಿಬಿರಾರ್ಥಿಗಳಿಂದ ವಿಶೇಷ ರಂಗ ಸಂಗೀತ ಹಮ್ಮಿಕೊಳ್ಳಲಾಗಿದೆ ಎಂದು ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ವಿಭಾಗದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಮಹಿಳಾ ಕಲಾವಿದರಿಗೆ ಕಳೆದ ಹದಿನೈದು ದಿನಗಳಿಂದ ರಂಗಸಂಗೀತ ಹಾಗೂ ಅಭಿನಯ ತರಬೇತಿ ನೀಡಲಾಗಿದೆ. ಈ ಕಾರ್ಯಾಗಾರದಲ್ಲಿ ತರಬೇತಿ ಪಡೆದ ಕಲಾವಿದರು ಕಂಪನಿ ನಾಟಕಗಳ ಸೊಗಡನ್ನು ನೆನಪಿಸುವ ಕಂದಪದ್ಯಗಳು, ರಂಗಗೀತೆ ಹಾಗೂ ಅಭಿನಯ ಸಮೇತ ರಂಗಸಂಗೀತ ಪ್ರಸ್ತುತಪಡಿಸಲಿದ್ದಾರೆ ಎಂದು ಹೇಳಿದರು.
ಹಿಂದಿನ ವೃತ್ತಿ ರಂಗಭೂಮಿಯ ಮೂಲ ಪರಂಪರೆ ಉಳಿಸಿಕೊಂಡು ಅದಕ್ಕೆ ಆಧುನಿಕ ರಂಗ ಸಂವೇದನೆಯ ಸ್ಪರ್ಶ ನೀಡುವ ನಿಟ್ಟಿನಲ್ಲಿ ಈಗಾಗಲೇ ದಾವಣಗೆರೆ ಮತ್ತು ಮೈಸೂರು ನಗರಗಳಲ್ಲಿ ತರಬೇತಿ ನೀಡಿ ಈ ಪ್ರದರ್ಶನ ಯಶಸ್ವಿಯಾಗಿ ನಡೆಸಲಾಗಿದೆ. ಒಂದು ಕಾಲದಲ್ಲಿ ವೃತ್ತಿ ರಂಗಭೂಮಿಯ ಪ್ರಮುಖ ಕೇಂದ್ರವಾಗಿದ್ದ ಬೆಳಗಾವಿಯಲ್ಲೂ ಇದೇ ಮಾದರಿಯ ಕಾರ್ಯಕ್ರಮ ಆಯೋಜಿಸಿದ್ದೇವೆ. ಈ ಮೂಲಕ ಕಂಪನಿ ನಾಟಕಗಳ ರಂಗಸಂಗೀತ ಪರಂಪರೆಯನ್ನು ಇಂದಿನ ಪೀಳಿಗೆಗೆ ಪ್ರಚುರಪಡಿಸುವ ಉದ್ದೇಶವಿದೆ ಎಂದರು.
ಕಾರ್ಯಕ್ರಮವನ್ನು ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಸಮಾರೋಪ ಭಾಷಣ ಮಾಡುವರು. ಜಿಲ್ಲೆಯ ಜಿಲ್ಲೆಯ ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಶಿಬಿರದ ನಿರ್ದೇಶಕ ರಾಜಪ್ರಭು ಧೋತ್ರೆ, ರಂಗತಜ್ಞ ಏಣಗಿ ಸುಭಾಸ, ಶಿಬಿರದ ಸಂಚಾಲಕ ಎನ್.ನಟರಾಜ ಸುದ್ದಿಗೋಷ್ಠಿಯಲ್ಲಿದ್ದರು.