ಬೆಳಗಾವಿಯ ಎಂಎಲ್‌ಐಆರ್‌ಸಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ರಕ್ಷಾ ಬಂಧನದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರು, ಸೈನಿಕರೊಂದಿಗೆ ಬ್ರಿಗೇಡಿಯರ್ ಗಿರೀಶ ಉಪಾಧ್ಯಾಯ, ವೇದಾ ಉಪಾಧ್ಯಾಯ ಇತರರಿದ್ದರು. 
ಬೆಳಗಾವಿ

ಸೈನಿಕರೊಂದಿಗೆ ರಕ್ಷಾ ಬಂಧನ ಆಚರಣೆ

ಬೆಳಗಾವಿ : ಇಲ್ಲಿನ ಮರಾಠಾ ಲಘು ಪದಾತಿದಳ(ಎಂಎಲ್‌ಐಆರ್‌ಸಿ) ದಲ್ಲಿ ಶುಕ್ರವಾರ ರಕ್ಷಾ ಬಂಧನವನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರ ಹಾಗೂ ಸುತ್ತಮುತ್ತಲಿನ 10ಕ್ಕೂ ಹೆಚ್ಚು ಶಾಲೆಗಳ 238 ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರು, ವಿವಿಧ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಎಂಎಲ್‌ಐಆರ್‌ಸಿ ಅಧಿಕಾರಿಗಳು, ವಿವಿಧ ಶ್ರೇಣಿಯ ಸೈನಿಕರು ಹಾಗೂ ಅಗ್ನಿವೀರರಿಗೆ ರಾಖಿ ಕಟ್ಟಿದರು.
ಸೈನಿಕರು ವಿದ್ಯಾರ್ಥಿನಿಯರಿಂದ ರಾಖಿಯನ್ನು ಹೆಮ್ಮೆ ಹಾಗೂ ವಿನಮ್ರತೆಯಿಂದ ರಾಖಿ ಸ್ವೀಕರಿಸಿ, ದೇಶ ಮತ್ತು ದೇಶದ ಜನರ ರಕ್ಷಣೆಗೆ ತಮ್ಮ ಅಚಲ ಬದ್ಧತೆಯನ್ನು ಪುನರುಚ್ಚರಿಸಿದರು. ವಿದ್ಯಾರ್ಥಿನಿಯರು ಸೈನಿಕರೊಂದಿಗೆ ಧೈರ್ಯ, ತ್ಯಾಗ, ಸೇವೆ ಹಾಗೂ ದೇಶಭಕ್ತಿಯ ಮೌಲ್ಯಗಳ ಕುರಿತು ಸಂವಾದ ನಡೆಸಿದರು.
ದಳದ ಕಮಾಂಡೆಂಟ್ ಬ್ರಿಗೇಡಿಯರ್ ಗಿರೀಶ ಉಪಾಧ್ಯಾಯ, ಫ್ಯಾಮಿಲಿ ವೆಲ್‌ಫೇರ್ ಆರ್ಗನೈಸೇಶನ್ ಅಧ್ಯಕ್ಷೆ ವೇದಾ ಉಪಾಧ್ಯಾಯ, ಜೆಸಿಒಗಳು, ಇತರರು ಪಾಲ್ಗೊಂಡಿದ್ದರು.