ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಬೆಳಗಾವಿ ಮಹಾನಗರದಲ್ಲಿ ಜರುಗಿದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಿಡುಗಡೆ ಆಗಿದ್ದ ಅನುದಾನ ದುರ್ಬಳಕೆ ದೂರಿನ ಹಿನ್ನೆಲೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ರಪೀಕ್.ಎ. ಆದೇಶಿಸಿದ್ದಾರೆ.
ಗಡಿಭಾಗದಲ್ಲಿ ಕನ್ನಡ ಉಳಿಸಿ ಬೆಳಸುವ ಹಾಗೂ ಕನ್ನಡ ಪರ ಸಾಂಸ್ಕೃತಿಕ ಚಟುವಟಿಕೆ ಉತ್ತೇಜಿಸುವ ನಿಟ್ಟಿನಲ್ಲಿ 2025-26ನೇ ಸಾಲಿನ ರಾಜ್ಯೋತ್ಸವಕ್ಕೆ ಪ್ರವಾಸೋದ್ಯಮ ಇಲಾಖೆಯು 50 ಲಕ್ಷ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಅನುದಾನ ಬಳಕೆ ಮಾಡುವಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ ಎಂದು ಕನ್ನಡ ಕ್ರೀಯಾ ಸಮಿತಿ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸದಸ್ಯರು, ವಿವಿಧ ಕನ್ನಡ ಪರ ಸಂಘಟನೆಗಳು ದೂರು ಸಲ್ಲಿಸಿವೆ. ಈ ಹಿನ್ನೆಲೆ ಕೂಡಲೇ ಬೆಳಗಾವಿ ಪ್ರಾದೇಶಿಕ ಆಯುಕ್ತರು 50 ಲಕ್ಷ ರೂ. ಅನುದಾನ ಬಳಕೆ ಕುರಿತು ನಿಯಮಾನುಸಾರ ಪರಿಶೀಲನೆ ನಡೆಸಿ ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಸಂಘಟನೆ ದೂರಿಗೆ ಸ್ಪಂದಿಸಿದ ಸರ್ಕಾರ
ಗಡಿಭಾಗದಲ್ಲಿ ಕನ್ನಡ ಚಟುವಟಿಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯ 50 ಲಕ್ಷ ರೂ. ಅನುದಾನ ದುರ್ಬಳಕೆ ವಿರುದ್ಧ ಸಮಾನ ಮನಸ್ಕ 12 ಕನ್ನಡ ಪರ ಸಂಘಟನೆಗಳು ಗಡಿ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ತ್ರಿಲೋಕಚಂದ್ರ ದೂರು ನೀಡಿದ್ದವು. ಇದೀಗ ಸರ್ಕಾರವು ತನಿಖೆಗೆ ಆದೇಶಿಸುವುದಕ್ಕೆ ಸಮಾನ ಮನಸ್ಕ ಕನ್ನಡ ಸಂಘಟನೆ ಮುಖಂಡ ಅಶೋಕ ಚಂದರಗಿ ಅಭಿನಂದನೆ ಸಲ್ಲಿಸಿದ್ದಾರೆ.