ಸವದತ್ತಿ ನವಿಲುತೀರ್ಥ ನೀರಾವರಿ ಕಚೇರಿ ಆವರಣದಲ್ಲಿ ರೈತರು ಅಧಿಕಾರಿಗೆ ಮನವಿ ಸಲ್ಲಿಸಿದರು. ಪಿ.ಎಚ್.ಪ್ರಭು ಚವಡಪ್ಪನವರ, ಚಂದ್ರು ಸಣ್ಣಗೌಡ್ರ, ಬಸವರಾಜ ಹಳಮನಿ ಇತರರಿದ್ದರು.
- ನವಿಲುತೀರ್ಥ ಕಚೇರಿಗೆ ರೈತರ ಮುತ್ತಿಗೆ
- ಅಧಿಕಾರಿಗಳಿಗೆ ಮನವಿ
ಸವದತ್ತಿ: ಯರಗಟ್ಟಿ ಏತ ನೀರಾವರಿ ಕಾಲುವೆಗೆ ತಿಂಗಳಾದರೂ ನೀರು ಹರಿಸದಿರುವುದಕ್ಕೆ ಆಕ್ರೋಶಗೊಂಡ ರೈತರು ಸೋಮವಾರ ನವಿಲುತೀರ್ಥ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಹಾಳಾಗಿರುವ ಪಂಪ್‌ಸೆಟ್ ದುರಸ್ತಿ ಮಾಡಿ ತಕ್ಷಣ ನೀರು ಹರಿಸಬೇಕು. ಇಲ್ಲವಾದರೆ ಸ್ಥಗಿತಗೊಂಡ ಅವಧಿ ಪರಿಗಣಿಸಿ 20 ದಿನ ನೀರು ಬಿಡಬೇಕು ಎಂದು ರೈತರು ಒತ್ತಾಯಿಸಿದರು.
ಮಲಪ್ರಭಾ ಎಡದಂಡೆ ಕಾಲುವೆಯಿಂದ ನೀರು ಹರಿಸುವ ನಾಲ್ಕು ಪಂಪ್‌ಗಳಲ್ಲಿ ಎರಡು ಕೆಟ್ಟಿರುವುದರಿಂದ ಆಲದಕಟ್ಟಿ ಸೇರಿ ಹಲವಾರು ಗ್ರಾಮಗಳ ಜಮೀನುಗಳಿಗೆ ನೀರು ತಲುಪಿಲ್ಲ. ಕಡಲೆ, ಗೋವಿನಜೋಳ, ಸೂರ್ಯಕಾಂತಿ ಸೇರಿ ಹಿಂಗಾರು ಬೆಳೆಗಳು ನೀರಿಲ್ಲದೆ ಒಣಗುವ ಹಂತಕ್ಕೆ ತಲುಪಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು. ಜಾಲಿಕಟ್ಟಿ, ಮಬನೂರ, ಜೀವಾಪುರ, ರೈನಾಪುರ, ಸೊಪ್ಪಡ್ಲ ಸೇರಿದಂತೆ ಸುಮಾರು 10,382 ಎಕರೆ ಹಾಗೂ 6,468 ಎಕರೆ ಕೆಳಭಾಗದ ಜಮೀನುಗಳು ಕಾಲುವೆ ನೀರಿನ ಮೇಲೆ ಅವಲಂಬಿತವಾಗಿವೆ. 40 ವರ್ಷ ಹಳೆಯ ಪಂಪ್‌ಗಳಿಂದ ಪ್ರತಿವರ್ಷ ಸಮಸ್ಯೆ ಎದುರಾಗುತ್ತಿದೆ ಎಂದು ಆರೋಪಿಸಿದರು.
ದುರಸ್ತಿ ವೇಳೆ ಮೋಟರ್ ಸುಟ್ಟ ಕಾರಣ ಸಮಸ್ಯೆಯಾಗಿದೆ. ಎಲ್ಲ ವಿಷಯಗಳನ್ನು ಪರಿಶೀಲಿಸಿ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಯನಿರ್ವಾಹಕ ಅಭಿಯಂತ ಪಿ.ಎಚ್. ಗಂಗಣ್ಣವರ ತಿಳಿಸಿದ್ದಾರೆ. ಅಧಿಕಾರಿಗಳ ಭರವಸೆ ಮೇರೆಗೆ ರೈತರು ಪ್ರತಿಭಟನೆ ಸ್ಥಗಿತಗೊಳಿಸಿ ಮನವಿ ಸಲ್ಲಿಸಿದರು. ಪ್ರಭು ಚವಡಪ್ಪನವರ, ಮಲ್ಲನಗೌಡ ಸಣ್ಣಗೌಡರ, ಈಶ್ವರ ಚವಡಪ್ಪನವರ, ಬಸವರಾಜ ಹಳಮನಿ, ಚಂದ್ರು ಸಣ್ಣಗೌಡ್ರ ಇತರರಿದ್ದರು.