ಹುಕ್ಕೇರಿ ಈಶ್ವರಲಿಂಗ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಆದಿತ್ಯ ಕಲಾಲ, ರಾಮಮೂರ್ತಿ ಕೆ.ವಿ., ಡಿ.ಕೆ.ಅವರಗೋಳ, ಎಸ್.ಎಸ್.ಮರಿನಾಯಿಕ ಇತರರಿದ್ದರು. 
ಬೆಳಗಾವಿ

ಗರ್ಭಿಣಿಯರಿಗೆ ಪೌಷ್ಟಿಕಾಂಶ ಒದಗಿಸಿ

ಹುಕ್ಕೇರಿ: ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವುದರಿಂದ ಮಗು ಸದೃಢವಾಗಿ ಬೆಳೆಯುತ್ತದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅರಿವು ಮೂಡಿಸಬೇಕು ಎಂದು ಸಿವಿಲ್ ನ್ಯಾಯಾಧೀಶ ಆದಿತ್ಯ ಕಲಾಲ ಹೇಳಿದರು.
ಈಶ್ವರಲಿಂಗ ದೇವಸ್ಥಾನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಕೀಲರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲೂಕಾಡಳಿತದಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ಪೌಷ್ಟಿಕ ಆಹಾರ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಮತ್ತು ಮಕ್ಕಳ ಸರ್ವಾಂಗೀಣ ಬೆಳವಣಿಗೆಗಾಗಿ ಪ್ರತ್ಯೇಕವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಮೂರ್ತಿ ಕೆ.ವಿ. ಮಾತನಾಡಿ, ಅಪೌಷ್ಟಿಕತೆ ನೀಗಿಸಲು ಚಿಕ್ಕಮಕ್ಕಳು ಮತ್ತು ತಾಯಿಗೆ ಪೌಷ್ಟಿಕ ಆಹಾರ ಒದಗಿಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಡಿ.ಕೆ.ಅವರಗೋಳ ಮಾತನಾಡಿದರು. ವಕೀಲರಾದ ಆಶಾ ಸಿಂಗಾಡಿ ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ, ಎರಡು ವರ್ಷದ ಮಕ್ಕಳಿಗೆ ಅನ್ನ ಪ್ರಾಶನ ಹಾಗೂ ವೇಷಭೂಷಣ ಕಾರ್ಯಕ್ರಮ ಜರುಗಿತು.
ಅಪರ ಸರ್ಕಾರಿ ವಕೀಲ ಅನಿಲ ಕರೋಶಿ, ವಕೀಲರ ಸಂಘದ ಉಪಾಧ್ಯಕ್ಷ ಎಸ್.ಎಸ್.ಮರಿನಾಯಿಕ, ಕಾರ್ಯದರ್ಶಿ ಎಸ್.ಎನ್.ಮಗದುಮ್ಮ,
ಎಸ್.ಎ.ಮಲ್ಲಾಪುರೆ ಇತರರಿದ್ದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಮಲಾ ಹಿರೇಮಠ ನಿರೂಪಿಸಿದರು. ಶೈಲಾ ಪಾಟೀಲ ವಂದಿಸಿದರು.