ಬೆಳಗಾವಿ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಡಿಸಿ ಮೊಹಮ್ಮದ ರೋಷನ್ ನೇತೃತ್ವದಲ್ಲಿ ಮಹಾರಾಷ್ಟ್ರ ಕನ್ನಡಿಗರ ಸಮಸ್ಯೆ ಮತ್ತು ಪರಿಹಾರ ಸಭೆ ಜರುಗಿತು. ಮಾಜಿ ಶಾಸಕ ವಿಕ್ರಂ ಸಾವಂತ, ಆಯುಕ್ತ ಭೂಷಣ ಬೋರಸೆ ಇತರರಿದ್ದರು. 
ಬೆಳಗಾವಿ

ಮಹಾ ಕನ್ನಡಿಗರಿಗೆ ಶಿಕ್ಷಣ, ಉದ್ಯೋಗ ಕಲ್ಪಿಸಿ

ಬೆಳಗಾವಿ :ಮಹಾರಾಷ್ಟ್ರದಲ್ಲಿ ಕನ್ನಡ ಮಾಧ್ಯಮ ವ್ಯಾಸಂಗ ಮಾಡುವ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ.5ರಷ್ಟು ವಿಶೇಷ ಮೀಸಲಾತಿ ಕಲ್ಪಿಸಬೇಕು. ಮಹಾರಾಷ್ಟ್ರದ 747 ಗ್ರಾಮಗಳಲ್ಲಿನ ಕನ್ನಡಿಗರಿಗಾಗಿ ವಿಶೇಷ ಸ್ಥಾನಮಾನ ನೀಡಬೇಕು. ರಾಜ್ಯೋತ್ಸವ ಆಚರಿಸಲು ವಿಶೇಷ ಅನುದಾನ ಬಜೆಟ್‌ನಲ್ಲಿ ಮೀಸಲಿಡಬೇಕು ಎಂದು ಮಹಾರಾಷ್ಟ್ರ ಕನ್ನಡಿಗರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾರಾಷ್ಟ್ರ ಕನ್ನಡಿಗರ ಸಮಸ್ಯೆ ಮತ್ತು ಪರಿಹಾರ ಕುರಿತು ಸಭೆಯಲ್ಲಿ ಭಾಗವಹಿಸಿದ್ದ ಮಹಾರಾಷ್ಟ್ರ ಜತ್ತ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿಕ್ರಂ ಸಾವಂತ ನೇತೃತ್ವದ ಕನ್ನಡಿಗರ ನಿಯೋಗ ಹಲವು ಬೇಡಿಕೆಗಳ ಮನವಿ ಸಲ್ಲಿಸಿತು.
ಈಗಾಗಲೇ ಮಹಾರಾಷ್ಟ್ರ ಸರ್ಕಾರವು ಕರ್ನಾಟಕದಲ್ಲಿ ಮರಾಠಿ ಮಾಧ್ಯದಲ್ಲಿ ಓದಿದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ.3ರಷ್ಟು ಮೀಸಲಾತಿ ನೀಡುತ್ತಿದೆ. ಕರ್ನಾಟಕಸ 865ಹಳ್ಳಿಗಳಲ್ಲಿರುವ ಮರಾಠಿ ಭಾಷಿಕರಿಗೆ, ಹೋರಾಟಗಾರರಿಗೆ ವಿಶೇಷ ಸಹಕಾರ ಜತೆಗೆ ಸರ್ಕಾರದ ವಿವಿಧ ಯೋಜನೆಯ ಸೌಲಭ್ಯ ಕಲ್ಪಿಸುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮರಾಠಿ ಶಿಕ್ಷಕರ ನೇಮಕ ಮಾಡುತ್ತಿರುವುದನ್ನು ಕರ್ನಾಟಕ ಸರ್ಕಾರ ತಡೆ ಹಿಡಿಯಬೇಕು.
ಮಹಾರಾಷ್ಟ್ರದ ಕನ್ನಡ ಭಾಷಿಕ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರ, ಸರ್ಕಾರಿ ಪ್ರೌಢ ಶಾಲಾ, ಕಾಲೇಜುಗಳು ಇಲ್ಲದಿರುವ ಕಾರಣ ಬೆಳಗಾವಿ, ವಿಜಯಪುರಕ್ಕೆ ಬರಬೇಕಾಗಿದೆ. ಈ ಪ್ರದೇಶದಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಲುಇ, ಕನ್ನಡ ನಾಮಫಲಕ ಹಾಕಲು ಮಹಾರಾಷ್ಟ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಕರ್ನಾಟಕದ ನವೋದಯ, ರಾಣಿ ಚನ್ನಮ್ಮ ಇತರ ವಸತಿ ಶಾಲೆಗಳಲ್ಲಿ ಮಹಾಷ್ಟ್ರದಲ್ಲಿನ ಕನ್ನಡಿಗರ ಮಕ್ಕಳಿಗೆ ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ವಿಶೇಷ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ಜತ್ತ, ಸೊಲ್ಲಾಪುರ, ಸಂಖದಲ್ಲಿ ಕನ್ನಡ ಭವನ ನಿರ್ಮಾಣ ಮಾಡಬೇಕು. ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲು ವಿಶೇಷ ಅನುದಾನ, ಕನ್ನಡಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ಗಡಿಕನ್ನಡಿಗರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ವಿನಂತಿಸಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಹಾಗೂ ಕರ್ನಾಟಕ ಸರ್ಕಾರದ ವಿವಿಧ ಯೋಜನೆ ಸೌಲಭ್ಯ ಕಲ್ಪಿಸುವ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅಲ್ಲಿನ ಕನ್ನಡಿಗರ ಹಿತರಕ್ಷಣೆ ಕಾಪಾಡಲು ಜಿಲ್ಲಾಡಳಿತ ಬದ್ಧವಾಗಿದೆ. ಕನ್ನಡ ಶಿಕ್ಷಕರ ನೇಮಕ, ಕನ್ನಡ ಮಾಧ್ಯಮ ಪ್ರೌಢ ಶಾಲೆ ಆರಂಭ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಮಹಾರಾಷ್ಟ್ರದ ಆದರ್ಶ ಕನ್ನಡ ಬಳಗ ಅಧ್ಯಕ್ಷ ಮಲಿಕಜಾನ್ ಶೇಖ್, ಕಾಂತೇಶ ಸನ್ನೊಳ್ಳಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಡಿ. ಕೋಳೆಕರ್, ಕನ್ನಡ ಮತ್ತು ಸಂಸ್ಕೃತ ಇಲಾಖೆ ಉಪನಿರ್ದೇಕಿ ವಿದ್ಯಾವತಿ ಭಜಂತ್ರಿ ಇತರರಿದ್ದರು.
..............................
ಕೋಟ್ಸ್
ಕನ್ನಡ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಮಹಾರಾಷ್ಟ್ರದ ಜತ್ತ ಮತ್ತು ಅಕ್ಕಲಕೋಟ ಪ್ರದೇಶಗಳಿಗೆ ಕರ್ನಾಟಕ ನೀರಾವರಿ ಯೋಜನೆ ವಿಸ್ತರಿಸಬೇಕು. ಕನ್ನಡಿಗರು ವಾಸಿಸುವ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ಸೌಲಭ್ಯ, ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಗುಡ್ಡಾಪುರ ದಾನಮ್ಮ ದೇವಸ್ಥಾನಕ್ಕೆ ಮೂಲ ಸೌಕರ್ಯ ಕಲ್ಪಿಸಬೇಕು.ಈ ಕುರಿತು ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಬೇಕು.
- ವಿಕ್ರಂ ಸಾವಂತ, ಮಹಾರಾಷ್ಟ್ರ ಜತ್ತ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ
....................