ಬೆಳಗಾವಿ ಸದಾಶಿವನಗರದ ರೆಡ್ಡಿ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಸವರಾಜ ಬಾವಲತ್ತಿ , ರಾಮಣ್ಣ ಮುಳ್ಳೂರ ಮಾತನಾಡಿದರು. ಕಾಂತು ಜಾಲಿಬೇರಿ, ಪರಮೇಶ್ವರ ಮುಳ್ಳೂರ ಇತರರಿದ್ದರು. 
ಬೆಳಗಾವಿ

ರೆಡ್ಡಿ ಸಮುದಾಯದ ಶಾಸಕರಿಗೆ ಸೂಕ್ತ ಪ್ರಾತಿನಿಧಿ ಕಲ್ಪಿಸಿ

ಬೆಳಗಾವಿ:ರಾಜ್ಯ ಕಾಂಗ್ರೆಸ್ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಪಕ್ಷದ ರೆಡ್ಡಿ ಸಮುದಾಯದ ಶಾಸಕರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹಂತ ಹಂತವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಬೆಳಗಾವಿ ರಡ್ಡಿ ಸಂಘದ ಮಾಜಿ ಉಪಾಧ್ಯಕ್ಷ ಬಸವರಾಜ ಬಾವಲತ್ತಿ ಎಚ್ಚರಿಕೆ ನೀಡಿದರು.
ಸದಾಶಿವನಗರದ ರೆಡ್ಡಿ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರು ಎಂದಿಗೂ ಕಾಂಗ್ರೆಸ್‌ಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿಲ್ಲ. ಆದರೂ ಅನುಭವಿ ಹಾಗೂ ಜನಪರ ನಾಯಕರನ್ನು ಕಡೆಗಣಿಸಿರುವುದು ಬೇಸರದ ಸಂಗತಿ. ಸಚಿವ ಸಂಪುಟದಿಂದ ಎಚ್.ಕೆ. ಪಾಟೀಲ ಅವರನ್ನು ಕೈಬಿಟ್ಟಿರುವುದು ಮತ್ತು ರಾಮಲಿಂಗಾ ರೆಡ್ಡಿಗೆ ಅವಕಾಶ ನೀಡದಿರುವುದು ರೆಡ್ಡಿ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದರು. ಪಕ್ಷದಲ್ಲಿ ನಿಷ್ಠಾವಂತರಿಗೆ ಗೌರವ ಇಲ್ಲದಂತಾಗಿದೆ ಎಂಬ ಭಾವನೆ ಸಮುದಾಯದಲ್ಲಿ ಮೂಡಿದೆ ಎಂದು ತಿಳಿಸಿದರು.
ರಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ ಮಾತನಾಡಿ,ರಾಜ್ಯದಲ್ಲಿ ಸುಮಾರು 80 ಲಕ್ಷ ಜನಸಂಖ್ಯೆ ಹೊಂದಿರುವ ರೆಡ್ಡಿ ಸಮುದಾಯಕ್ಕೆ ಕನಿಷ್ಠ ನಾಲ್ವರು ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಆಗ್ರಹಿಸಿದ ಅವರು, ಈ ಅನ್ಯಾಯವನ್ನು ಕಾಂಗ್ರೆಸ್ ಹೈಕಮಾಂಡ್ ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರದಲ್ಲಿ ರಡ್ಡಿ ಸಮುದಾಯದ ಶಾಸಕರಿಗೆ ಪದೇ ಪದೇ ಅನ್ಯಾಯ ಆಗುತ್ತಿರುವ ಕುರಿತು ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ ಗಾಂಧಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು. ಈ ವಿಷಯದಲ್ಲಿ ನಿರ್ಲಕ್ಷೃ ಮಾಡಿದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಉಪಾಧ್ಯಕ್ಷ ಕಾಂತು ಜಾಲಿಬೇರಿ, ಪರಮೇಶ್ವರ ಮುಳ್ಳೂರ, ಪ್ರಕಾಶ ಕಕರಡ್ಡಿ, ಮಂಜುನಾಥ ಪಾಟೀಲ, ಬಸವರಾಜ ಗಣಿ ಇತರರಿದ್ದರು.