ಆರೋಗ್ಯ ಹಕ್ಕು ಕಾಯಿದೆ ಜಾರಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಸೋಮವಾರ ಪ್ರತಿಭಟಿಸಲಾಯಿತು.
ಬೆಳಗಾವಿ: ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಗುಣಮಟ್ಟದ ಔಷಧ ಲಭ್ಯವಿರಬೇಕು. ಆರೋಗ್ಯಕರ ಹಕ್ಕಿನ ಕಾಯಿದೆ ಜಾರಿಯಾಗೇಬೇಕು ಎಂಬುದು ಸೇರಿ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಸೋಮವಾರ ಆರೋಗ್ಯ ಹಕ್ಕಿನ ಜಾಥಾದಡಿಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟಿಸಲಾಯಿತು.
ಡ್ರಗ್ಸ್ ಆ್ಯಕ್ಷನ್ ಫೋರಮ್, ಸಾರ್ವತ್ರಿಕ ಆರೋಗ್ಯ ಆಂದೋಲನ ನೇತೃತ್ವದಲ್ಲಿ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ‌್ಯಾಲಿ ಮೂಲಕ ತೆರಳಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ರ‌್ಯಾಲಿಯಲ್ಲಿ ಉಚಿತ ಔಷಧ ನಮ್ಮ ಹಕ್ಕು, ಜನರ ಆರೋಗ್ಯ ಮಾರಾಟಕ್ಕಿಲ್ಲ, ಆರೋಗ್ಯದ ಹಕ್ಕು ಮಾನವ ಹಕ್ಕು ಎಂಬಿತ್ಯಾದಿ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.
ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಔಷಧ ಉಚಿತವಾಗಿ ಸಿಗಬೇಕು. ಯಾವುದೇ ಕಾರಣಕ್ಕೂ ಔಷಧಗಳನ್ನು ಹೊರಗಡೆ ಖರೀದಿಸುವಂತೆ ಚೀಟಿ ಕೊಡಬಾರದು.ಆರೋಗ್ಯ ರಕ್ಷಣೆಯನ್ನು ಮೂಲಭೂತ ಹಕ್ಕನ್ನಾಗಿ ಮಾಡುವ ನೂತನ ಕಾನೂನು ಜಾರಿಯಾಗಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಕರಣಗೊಳಿಸುವ ಯೋಜನೆ ಕೈಬಿಡಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಗೊಳಿಸಬೇಕು ಹಾಗೂ ಖಾಸಗಿ ವಲಯದಲ್ಲಿ ಆಸ್ಪತ್ರೆಗಳ ಶುಲ್ಕವನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಡಾ.ಗೋಪಾಲ ದಾಬಡೆ, ಶಿವಾಜಿ ಕಾಗಣೀಕರ, ತಾನಾಜಿ ಸಾವಂತ, ನಾಗರಾಜ ವಡ್ಡರ, ಐನಾಸೇಕ್, ಸಂಪತ ದೊಡ್ಡಮನಿ, ಸುವರ್ಣ, ಪ್ರಸನ್ನ ಇತರರಿದ್ದರು.