ಆನಿಗೋಳ ಗ್ರಾಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೈಗೊಂಡ ಪ್ರತಿಭಟನೆ ಹಿನ್ನೆಲೆಯಲ್ಲಿ ಸಾಲುಗಟ್ಟಿ ನಿಂತ ಬಸ್ ಹಾಗೂ ವಾಹನಗಳು. 
ಬೆಳಗಾವಿ

ಬಸ್ ನಿಲುಗಡೆಗೆ ಆಗ್ರಹಿಸಿ ಪ್ರತಿಭಟನೆ

ರಾಘವೇಂದ್ರಗೌಡ ಭೀ ಪಾಟೀಲ್

ಬಸ್ ನಿಲುಗಡೆಗೆ ಆಗ್ರಹಿಸಿ ರೈತರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ತಾಲೂಕಿನ ಆನಿಗೋಳ ಗ್ರಾಮದಲ್ಲಿ ಮಂಗಳವಾರ ನಾಲ್ಕು ಗಂಟೆ ಸಂಚಾರ ತಡೆದು ಪ್ರತಿಭಟಿಸಿದರು.

ವಕ್ಕುಂದ, ಕೋರಿಕೊಪ್ಪ ಹಾಗೂ ಇಂಗಳಗಿ ಗ್ರಾಮಗಳ ಸಾರ್ವಜನಿಕರೂ ಸಹ ಧಾರವಾಡ, ಸವದತ್ತಿ, ಮಲ್ಲಮ್ಮನ ಬೆಳವಡಿ ಹಾಗೂ ಬೈಲಹೊಂಗಲಕ್ಕೆ ಸಂಚರಿಸಲು ಆನಿಗೋಳ ಗ್ರಾಮದ ಬಸ್ ನಿಲ್ದಾಣ ಅವಲಂಬಿಸಿದ್ದಾರೆ. ಆದರೆ, ಸವದತ್ತಿ, ಧಾರವಾಡ ಹಾಗೂ ಬೈಲಹೊಂಗಲ ಘಟಕಗಳ ಕೆಲ ಬಸ್‌ಗಳು ಗ್ರಾಮದಲ್ಲಿ ನಿಲುಗಡೆ ಮಾಡದೆ ಸಾಗುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಸ್‌ಗೆ ಹತ್ತಿಸಿಕೊಳ್ಳಲಾಗುತ್ತಿದ್ದು, ಆನಿಗೋಳ ಸೇರಿದಂತೆ ಮುಂದಿನ ಗ್ರಾಮಗಳ ಪ್ರಯಾಣಿಕರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿದರು. ಸುಮಾರು ನಾಲ್ಕು ಗಂಟೆ ಸಂಚಾರ ತಡೆದಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡು ಕಿಮೀಗಟ್ಟಲೆ ಸಂಚಾರ ಸಿಕ್ಕು ಉಂಟಾಗಿ ಪ್ರಯಾಣಿಕರು ಹಾಗೂ ಸವಾರರು ತೊಂದರೆ ಅನುಭವಿಸುವಂತಾಯಿತು.

ಸ್ಥಳಕ್ಕೆ ಸಿಪಿಐ ಪ್ರಮೋದ ಯಲಿಗಾರ, ಘಟಕ ವ್ಯವಸ್ಥಾಪಕಿ ಶೋಭಾ ಮನಗೂಳಿ ಹಾಗೂ ಮಹೇಶ ತಿರಕನ್ನವರ ಆಗಮಿಸಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಆನಿಗೋಳ ಗ್ರಾಮದಲ್ಲಿ ಸವದತ್ತಿ, ಧಾರವಾಡ ಮತ್ತು ಬೈಲಹೊಂಗಲ ಘಟಕಗಳ ಬಸ್‌ನಿಲುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಗ್ರಾಪಂ ಮಾಜಿ ಅಧ್ಯಕ್ಷ ರಮೇಶ ಪರಂಡಿ, ವಿಜಯಕಾಂತ ಅಮಟೂರ, ಸಂತೋಷ ಮಾಲದಿನ್ನಿ, ಮಾರುತಿ ದಳವಾಯಿ, ಪುಟ್ಟಣ್ಣ ಕಾಡನ್ನವರ, ವೀರಭದ್ರ ಬೆಳವಡಿ, ಬಸವರಾಜ ಹೊಂಗಲ, ಶಂಕರ ಗುಳಪ್ಪನವರ ಹಾಗೂ ವಿದ್ಯಾರ್ಥಿಗಳು ಇದ್ದರು.