ಕರಿಕಟ್ಟಿ ಹಾಗೂ ಅಸುಂಡಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಮೃಣಾಲ ಹೆಬ್ಬಾಳ್ಕರ್, ಶ್ರೀಧರ ಅಸಂಗಿಹಾಳ ಇತರರಿದ್ದರು. 
ಬೆಳಗಾವಿ

ಕಾರ್ಖಾನೆ ರಸ್ತೆ ಬಂದ್ ಮಾಡಿ ಪ್ರತಿಭಟನೆ

ರಾಘವೇಂದ್ರಗೌಡ ಭೀ ಪಾಟೀಲ್
ಸವದತ್ತಿ: ತಾಲೂಕಿನ ಕರಿಕಟ್ಟಿ ರಸ್ತೆಯಲ್ಲಿನ ಹರ್ಷಾ ಸಕ್ಕರೆ ಕಾರ್ಖಾನೆಯಿಂದ  ಪರಿಸರ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ ಎಂದು ಆರೋಪಿಸಿ ಕರಿಕಟ್ಟಿ ಹಾಗೂ ಅಸುಂಡಿ ಗ್ರಾಮಸ್ಥರು ಬೆಳಗಾವಿ-ಸವದತ್ತಿ ರಾಜ್ಯ ಹೆದ್ದಾರಿಯ ಕಾರ್ಖಾನೆ ರಸ್ತೆ ಬಂದ್ ಮಾಡಿ ಗುರುವಾರ ಪ್ರತಿಭಟನೆ ನಡೆಸಿದರು.
ಮುಖಂಡ ಪ್ರಕಾಶ ಕಪಲಿ, ಭೀಮಪ್ಪ ಮೊಖಾಸಿ ಹಾಗೂ ಸಿದ್ದಪ್ಪ ಕಟಗಿ ಮಾತನಾಡಿ, ಕಾರ್ಖಾನೆ ಸೂಸುತ್ತಿರುವ ಬೂದಿ, ದುರ್ವಾಸನೆ ಮತ್ತು ದೂಳಿನಿಂದ ಕ್ಯಾನ್ಸರ್‌ನಂತಹ ಮಾರಕ ರೋಗ, ಉಸಿರಾಟ ಹಾಗೂ ಅಲರ್ಜಿ ಸಮಸ್ಯೆ ಹೆಚ್ಚುತ್ತಿವೆ. ಅಲ್ಲದೆ, ಪರಿಸರದ ಮೇಲೆ ತೀವ್ರ ಪರಿಣಾಮ ಬಿರುತ್ತಿದೆ ಎಂದು ಆರೋಪಿಸಿದರು.
 ಕಾರ್ಖಾನೆ ಪರವಾಗಿ ಸ್ಥಳಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮುಖಂಡ ಮೃಣಾಲ ಹೆಬ್ಬಾಳ್ಕರ್ ಪ್ರತಿಭಟನಾನಿರತರ ಸಮಸ್ಯೆ ಆಲಿಸಿ ಮುಂಬರುವ 20 ದಿನಗಳಲ್ಲಿ ಹಂಗಾಮು ಪೂರ್ಣಗೊಳ್ಳಲಿದೆ. ಮುಂದಿನ ಹಂಗಾಮು ಆರಂಭಿಸುವ ಮುನ್ನ ಜನರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಕುರಿತು ಸವದತ್ತಿ ತಹಸೀಲ್ದಾರ್‌ಗೆ ಮುಚ್ಚಳಿಕೆ ಬರೆದುಕೊಡಲಾಯಿತು. ಗ್ರೇಡ್-2 ತಹಸೀಲ್ದಾರ್ ಎಂ.ಎಂ.ಮಠದ, ಶಿರೆಸ್ತೇದಾರ ಶಶಿಧರ ವನಕಿ, ಸಿಪಿಐ ಸುರೇಶ ಬಂಡೆಗುಂಬಳ, ಶ್ರೀಧರ ಅಸಂಗಿಹಾಳ, ಮಹಾಂತೇಶ ಯಾದವ, ರವಿ ಕರೆನ್ನವರ, ಕಿರಣ ಕಾಡನ್ನವರ ಇತರರಿದ್ದರು.