ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಪ್ರತಿಭಟನೆ ನಡೆಸುತ್ತಿರುವ ವಿವಿಧ ಸಂಘಟನೆಗಳ ಬೇಡಿಕೆ ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ನಗರಾಭಿವದ್ಧಿ ಸಚಿವ ಬೈರತಿ ಸುರೇಶ ಭರವಸೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸೋಮವಾರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಕನ್ನಡ ನಾಡು ನುಡಿ ಸಂಸ್ಕೃತಿ, ಭಾಷೆ, ನೆಲ ಜಲದ ಬಗ್ಗೆ ಗೌರವ ಹೊಂದಿರುವ ಸರ್ಕಾರ ನಮ್ಮದು, ಸುವರ್ಣಸೌಧದ ಪ್ರವೇಶ ದ್ವಾರದಲ್ಲಿ ತಾಯಿ ಭುವನೇಶ್ವರಿಯ 108 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದರು.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರವನ್ನು ತಾಲೂಕಾಗಿ ಮಾಡುವಂತೆ ಒತ್ತಾಯಿಸಿ ಹೋರಾಟ ಸಮಿತಿ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಸಚಿವರು ಹೊಸ ತಾಲೂಕು ರಚನೆ ಬಗ್ಗೆ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರ ಗಮನಕ್ಕೆ ತರಲಾಗುವುದು. ಸಿಎಂ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಅವರು ಎಂದಿಗೂ ಅಹಿಂದ ಸಮುದಾಯವನ್ನು ಕೈಬಿಡುವುದಿಲ್ಲ ಎಂದು ಭರವಸೆ ನೀಡಿದರು.