ವಿದ್ಯುತ್ ಸೇರಿದಂತೆ ವಿವಿಧ ಸೇವಾ ಕ್ಷೇತ್ರಗಳ ಖಾಸಗೀಕರಣ ಹಿಂಪಡೆಯುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತ ಸಂಘಟನೆಗಳಿಂದ ಮನವಿ ಸಲ್ಲಿಸಲಾಯಿತು. ಚೂನಪ್ಪ ಪೂಜಾರಿ, ರಾಜು ಮರವೆ, ಪ್ರಕಾಶ ನಾಯಕ, ಪ್ರೇಮ ಚೌಗಲಾ, ರಾಮನಗೌಡ ಪಾಟೀಲ ಇತರರಿದ್ದರು.
ಬೆಳಗಾವಿ : ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿದ್ಯುತ್ ಸೇರಿ ವಿವಿಧ ಸೇವಾ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೈತರು ದೇಶದ ಆಹಾರ ಭದ್ರತೆಯ ಮುಖ್ಯ ಆಧಾರವಾಗಿದ್ದಾರೆ. ಪ್ರತಿಕೂಲ ಹವಾಮಾನ, ಬೆಲೆ ಏರಿಳಿತ, ಉತ್ಪಾದನಾ ವೆಚ್ಚ ಹೆಚ್ಚಳ ಸೇರಿ ಹಲವು ಸಂಷಕ್ಟ ಮತ್ತು ಸವಾಲುಗಳನ್ನು ಎದುರಿಸಿ, ಅನ್ನದಾತರು ದೇಶಕ್ಕೆ ಆಹಾರ ಒದಗಿಸುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ರೈತ ವಲಯವನ್ನು ಪ್ರೋತ್ಸಾಹಿಸಬೇಕಾದ ಸರ್ಕಾರಗಳೇ ಈಗ ಖಾಸಗೀರಕರಣ ನೀತಿಗಳ ಮೂಲಕ ತೊಂದರೆ ಕೊಡಲು ಮುಂದಾಗುತ್ತಿರುವುದು ಸರಿಯಲ್ಲ. ಕೃಷಿ, ವಿದ್ಯುತ್, ನೀರಾವರಿ ಹಾಗೂ ಸಾರ್ವಜನಿಕ ಸೇವಾ ಕ್ಷೇತ್ರಗಳ ಖಾಸಗೀಕರಣವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಚೂನಪ್ಪ ಪೂಜಾರಿ ಮಾತನಾಡಿ, ಕೆಲ ಯೋಜನೆಗಳಲ್ಲಿ ಆರಂಭದಲ್ಲಿ ಉಚಿತ ಎಂದು ಹೇಳುತ್ತಾರೆ ಬಳಿಕ ಅದಕ್ಕೆ ದೊಡ್ಡ ಮಟ್ಟದ ದರ ನಿಗದಿ ಮಾಡುತ್ತಾರೆ. ಇದೇ ರೀತಿ ಈಗ ವಿದ್ಯುತ್ ಕ್ಷೇತ್ರದಲ್ಲೂ ಸ್ಮಾರ್ಟ್ ಕಾರ್ಡ್ ಮತ್ತು ಜಿಪಿಎಸ್ ಅಳವಡಿಸಲು ಮುಂದಾಗಿದ್ದಾರೆ. ಈ ಹೊಸ ವ್ಯವಸ್ಥೆಯಿಂದ ಮೊಬೈಲ್ ರೀತಿಯಲ್ಲೇ ಖಾತೆಯಲ್ಲಿ ಹಣ ಖಾಲಿಯಾದ ತಕ್ಷಣ ಸ್ವಯಂಚಾಲಿತವಾಗಿ ವಿದ್ಯುತ್ ಸ್ಥಗಿತಗೊಳ್ಳುತ್ತದೆ. ಇದರಿಂದ ದೇಶದ ರೈತರು ಹಾಗೂ ಜನಸಾಮಾನ್ಯರು ಭಾರಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಹೀಗಾಗಿ, ಸರ್ಕಾರ ವಿದ್ಯುತ್ ಖಾಸಗೀಕರಣದ ಟೆಂಡರ್ ಪ್ರಕ್ರಿಯೆ ವಾಪಸ ಪಡೆಯಬೇಕು. ಇಲ್ಲದೇ ಹೋದಲ್ಲಿ ರಾಜ್ಯಾದ್ಯಂತ ಎಲ್ಲ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಎಕ ನೀಡಿದರು.
ರಾಜು ಮರವೆ, ಪ್ರಕಾಶ ನಾಯಕ, ಪ್ರೇಮ ಚೌಗಲಾ, ರಾಮನಗೌಡ ಪಾಟೀಲ, ಲಕ್ಷ್ಮೀ ಬಾಡ್ಕರ ಇತರರಿದ್ದರು.