1886 ಯೋಜನೆಗಳಿಂದ 6,92,545 ಉದ್ಯೋಗಾವಕಾಶ ನಿರೀಕ್ಷಿಸಲಾಗಿದೆ 
ಬೆಳಗಾವಿ

ಉದ್ಯೋಗ ಸೃಷ್ಟಿಗೆ ಆದ್ಯತೆ

ಧರ್ಮರಾಜ ರಾಮನಗೌಡ ಪಾಟೀಲ
ಬೆಳಗಾವಿ: ಹೊಸ ಕೈಗಾರಿಕಾ ನೀತಿಯಿಂದ ರಾಜ್ಯದಲ್ಲಿ 93,925 ಉದ್ಯೋಗ ಸಷ್ಟಿಯಾಗಿದ್ದು, ಕಳೆದ ಎರಡೂವರೆ ವರ್ಷಗಳಲ್ಲಿ 1,91,454 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆಯಾಗಿದೆ ಎಂದು ಬಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವದ್ಧಿ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪ್ರಶ್ನೆಗೆ ಉತ್ತರಿಸಿ, ಕಳೆದ ಮೂರು ವರ್ಷಗಳಲ್ಲಿ (2022-23 ರಿಂದ 2025 ಅಕ್ಟೋಬರ್‌ವರೆಗೆ) 1886 ಯೋಜನೆಗಳಿಂದ 6,92,545 ಉದ್ಯೋಗಾವಕಾಶ ನಿರೀಕ್ಷಿಸಲಾಗಿದೆ. ಇವುಗಳಲ್ಲಿ 67 ಯೋಜನೆಗಳು ಅನುಷ್ಠಾನಗೊಂಡಿದ್ದು, 93,925 ಉದ್ಯೋಗ ಸಜನೆಯಾಗಿದೆ. ಹೊಸ ಕೈಗಾರಿಕಾ ನೀತಿ 2025-30 ಜಾರಿಗೆ ತಂದ ನಂತರ 93 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 5,50,805 ಕೋಟಿ ರೂ. ಬಂಡವಾಳ ಹೂಡಿಕೆ ಮತ್ತು 8,76,233 ಉದ್ಯೋಗಾವಕಾಶಗಳ ನಿರೀಕ್ಷೆ ಇದೆ ಎಂದರು.
ಹೊಸ ಕೈಗಾರಿಕಾ ನೀತಿಯು, ರಾಜ್ಯದ ಸಮಗ್ರ ಅಭಿವದ್ಧಿಯೊಂದಿಗೆ ಕೈಗಾರಿಕಾ ವಿಕಾಸದ ಯೋಜನೆಗಳನ್ನು ರೂಪಿಸಲಾಗಿದೆ. ಬೆಂಗಳೂರಿನಿಂದ ಹೊರಗಡೆ, ಕೈಗಾರಿಕಾ ಹಿಂದುಳಿದ ಪ್ರದೇಶವನ್ನು ಉತ್ತೇಜಿಸುವ ಗುರಿ ಹೊಂದಿದೆ. ರಾಜ್ಯದ ಎಲ್ಲ ಜಿಲ್ಲಾ ಪ್ರದೇಶಗಳಿಗೂ ಗಣನೀಯ ಪ್ರಮಾಣದಲ್ಲಿ ಕೈಗಾರಿಕೆಗಳ ವಿಸ್ತರಣೆ ಮಾಡುವ ಗುರಿ ಹೊಂದಲಾಗಿದೆ. ಹಿಂದುಳಿದ ತಾಲೂಕುಗಳಲ್ಲಿ ಹೂಡಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮೂರು ವಲಯಗಳನ್ನಾಗಿ ವರ್ಗಿಕರಿಸಿದೆ. ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆ ಅಥವಾ ತಾಲೂಕುಗಳನ್ನು ವಲಯ 1 ಮತ್ತು ವಲಯ-2ರಲ್ಲಿ ಹಾಗೂ ಬೆಂಗಳೂರು ನಗರ ಮತ್ತು
ಗ್ರಾಮಾಂತರ ಜಿಲ್ಲೆಗಳನ್ನು ವಲಯ 3ರಲ್ಲಿ ವರ್ಗೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೈಗಾರಿಕಾ ನೀತಿ ಅಡಿಯಲ್ಲಿ ಪ್ರೋತ್ಸಾಹ ಮತ್ತು ರಿಯಾಯಿತಿ ಪಡೆಯುವ ಕೈಗಾರಿಕೆಗಳು ಶೇ.70ರಷ್ಟು ಉದ್ಯೋಗಾವಕಾಶ ಹಾಗೂ ಗ್ರೂಪ್ ಡಿ ಉದ್ಯೋಗಗಳನ್ನು ಶೇ.100ರಷ್ಟು ಕನ್ನಡಿಗರಿಗೆ ನೀಡಬೇಕೆಂದು ಷರತ್ತು ವಿಧಿಸಲಾಗುತ್ತಿದೆ. 2018-19ರಿಂದ 2022-23ರವರೆಗೆ 1,878 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ 4,56,841.90 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಮತ್ತು 8,00,482 ಉದ್ಯೋಗಾವಕಾಶಗಳನ್ನು ನಿರೀಕ್ಷಿಸಲಾಗಿದೆ. ಇವುಗಳ ಪೈಕಿ 260 ಯೋಜನೆಗಳು ಅನುಷ್ಠಾನಗೊಂಡಿದ್ದು, ಇವುಗಳಿಂದ 98662.7 ಕೋಟಿ ಮೊತ್ತದ ಬಂಡವಾಳ ಹೂಡಿಕೆಯಾಗಿದೆ. 1,97,208 ಉದ್ಯೋಗ ಸಜನೆಯಾಗಿದೆ. ಕಳೆದ ಎರಡೂವರು ವರ್ಷಗಳಲ್ಲಿ 1,91,454 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆಯಾಗಿದೆ. 2023-24 ರಲ್ಲಿ 54,427 ಕೋಟಿ ರೂ., 2024-25ರಲ್ಲಿ 56,030 ಕೋಟಿ ರೂ., 2025-26 (ಏಪ್ರಿಲ್-ಸೆಪ್ಟೆಂಬರ್)80,997 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆಯಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.