ಅಡಹಳ್ಳಟ್ಟಿ ಗ್ರಾಮದ ಕೆರೆಗೆ ನೀರು ಹರಿಸಿದ ಪ್ರಯುಕ್ತ ಅಡಹಳ್ಳಟ್ಟಿ ಗ್ರಾಮದ ರೈತರು ಶಾಸಕ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಿದರು. ಶಿವು ಗುಡ್ಡಾಪುರ, ಮಹಾದೇವ ಹಿಪ್ಪರಗಿ, ಈರಗೌಡ ಪಾಟೀಲ, ಬಸು ಹಿಪ್ಪರಗಿ ಇತರರಿದ್ದರು.
- ಶಾಸಕ ಲಕ್ಷ್ಮಣ ಸವದಿ ಭರವಸೆ
- ರೈತರಿಂದ ಸನ್ಮಾನ ಸ್ವೀಕಾರ
ಅಥಣಿ ಗ್ರಾಮೀಣ: ಅಥಣಿ ನೆಲ ಧಾರ್ಮಿಕ, ಸಂಸ್ಕೃತಿ ಜತೆಗೆ ಪ್ರತಿರೋಧದ ಗುಣ ಹೊಂದಿದೆ. ಸತತ ಬರಗಾಲದಿಂದ ತತ್ತರಿಸಿದ ಕ್ಷೇತ್ರದ ಜನತೆಗೆ ಕೆಲವೇ ದಿನಗಳಲ್ಲಿ ನೀರಾವರಿ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಅಡಹಳ್ಳಟ್ಟಿ ಗ್ರಾಮದ ಕೆರೆಗೆ ನೀರು ಹರಿಸಿದ ಪ್ರಯುಕ್ತ ರೈತರಿಂದ ಮಂಗಳವಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ಕರಿಮಸೂತಿ, ತುಂಗಳ-ಸಾವಳಗಿ, ಹಲ್ಯಾಳ ಏತನೀರಾವರಿ ಕಾಮಗಾರಿ ಮುಗಿದು ಕೆಲವೆಡೆ ನೀರಾವರಿಯಾಗಿದೆ. ಇನ್ನುಳಿದ ಜಮೀನುಗಳಿಗೆ ನೀರು ಹರಿಸುವ ಉದ್ದೇಶದಿಂದ ಕೊಟ್ಟಲಗಿ ಅಮ್ಮಾಜೇಶ್ವರಿ ಏತನೀರಾವರಿ ಕಾಮಗಾರಿ ಕೈಗೊಂಡಿದ್ದು, ಶೇ.೭೦ ಪೂರ್ಣಗೊಂಡಿದೆ. ಉಳಿದ ಶೇ.೩೦ ಕಾಮಗಾರಿ ಫೆಬ್ರುವರಿಯಲ್ಲಿ ಪೂರ್ಣಗೊಳಿಸಲಾಗುವುದು. ಸಿಎಂ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರ ಸಹಕಾರವನ್ನು ಕ್ಷೇತ್ರದ ರೈತರು ಎಂದಿಗೂ ಮರೆಯುವುದಿಲ್ಲ. ಶಿಕ್ಷಣ, ಆರೋಗ್ಯ, ರಸ್ತೆ, ನೀರಾವರಿ, ಸವಳು-ಜವಳು ಸೇರಿ ವಿವಿಧ ಅಭಿವೃದ್ಧಿಗಳಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ ತೃಪಿ ಇದೆ ಎಂದರು.
ತಾಪಂ ಮಾಜಿ ಸದಸ್ಯ ಶಿವು ಗುಡ್ಡಾಪುರ ಮಾತನಾಡಿ, ನೀರಾವರಿ ಸಚಿವರಲ್ಲದಿದ್ದರೂ ನೀರಾವರಿಗೆ ಪ್ರಾಮುಖ್ಯತೆ ನೀಡಿದ ಸವದಿ ಅವರ ಕೊಡುಗೆ ಸ್ಮರಣೀಯ ಎಂದರು.
ಮಹಾದೇವ ಹಿಪ್ಪರಗಿ, ಈರಗೌಡ ಪಾಟೀಲ, ಬಸು ಹಿಪ್ಪರಗಿ, ಆನಂದ ಧೂಳಶೆಟ್ಟಿ, ಪರಸಪ್ಪ ಅಥಣಿ, ಪಿಕೆಪಿಎಸ್ ಅಧ್ಯಕ್ಷ ಘಟಿವಾಳಪ್ಪ ಗುಡ್ಡಾಪುರ, ಚಿದಾನಂದ ಮಠಪತಿ, ವಿಜಯ ಕೋಹಳ್ಳಿ, ರಾಮು ಹೊನವಾಡ, ಬಾಹುರಾಜ ತಾಂವಶಿ, ಅಪ್ಪಸಾಬನ್ ಶೇಗಾಂವಿ, ಶ್ರೀಶೈಲ ಸನದಿ ಇತರರಿದ್ದರು.