ಬೆಳಗಾವಿ ನಗರದ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪ್ರೀತಿ ಕಾಮಕರ್ ಮಾತನಾಡಿದರು. ಹಣುಮಂತ ಕೊಂಗಾಲಿ, ಕಾರ್ತಿಕ್.ಎಂ., ರಮೇಶ ಮೈಲುಗೋಳ, ರಾಜು ಭಾತಕಾಂಡೆ ಇತರರಿದ್ದರು.
ಬೆಳಗಾವಿ:ಬೀದಿಬದಿ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಾಪಾಡುವುದರ ಜತೆಗೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ಆದ್ಯತೆ ನೀಡುವುದು ಅಗತ್ಯ. ಈ ನಿಟ್ಟಿನಲ್ಲಿ ವ್ಯಾಪಾರಿಗಳುಪಾಲಿಕೆಯೊಂದಿಗೆ ಸಹಕಾರದಿಂದ ನಡೆದು ಸೌಹಾರ್ದಯುತ ವಾತಾವರಣ ಕಾಪಾಡಿಕೊಳ್ಳಬೇಕು ಎಂದು ಮೇಯರ ಪ್ರೀತಿ ಕಾಮಕರ ತಿಳಿಸಿದರು.
ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾರಾಟ ಸಮಿತಿ ಸಭೆಯಲ್ಲಿ ಮಾತನಾಡಿ,ರಸ್ತೆ ಹಾಗೂ ಫುಟ್‌ಪಾತ್‌ಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿಡುವಂತೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವಿದೆ. ಹೀಗಾಗಿ ನ್ಯಾಯಾಲಯದ ಆದೇಶ ಹಾಗೂ ಪಾಲಿಕೆ ನಿಯಮಗಳನ್ನು ಪಾಲಿಸುವುದರೊಂದಿಗೆ ಬೀದಿಬದಿ ವ್ಯಾಪಾರಿಗಳ ಜೀವನೋಪಾಯಕ್ಕೂ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕಿದೆ ಎಂದರು.
ಉಪಮೇಯರ ಹಣುಮಂತ ಕೊಂಗಾಲಿ ಮಾತನಾಡಿ, ಬೀದಿಬದಿ ವ್ಯಾಪಾರಿಗಳು ನಿಯಮಗಳನ್ನು ಪಾಲಿಸಿ ಪಾಲಿಕೆಗೆ ಸಹಕಾರ ನೀಡಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಮತ್ತು ಪಾಲಿಕೆಯ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದರು.
ಪಾಲಿಕೆ ಆಯುಕ್ತ ಕಾರ್ತಿಕ,ಎಂ. ಮಾತನಾಡಿ, ವ್ಯಾಪಾರಕ್ಕೆ ಸೂಕ್ತ ಸ್ಥಳಗಳನ್ನು ಗುರುತಿಸಿ ಸ್ಥಳ ಪರಿಶೀಲನೆ ನಡೆಸಲಾಗುವುದು. ಅಲ್ಲಿನ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಎಲ್ಲರ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ ಮೈಲುಗೋಳ, ರಾಜು ಭಾತಕಾಂಡೆ, ಶ್ರೇಯಸ ನಾಕಾಡಿ, ಸದಸ್ಯರಾದ ಸವಿತಾ ಕಾಂಬಳೆ, ಗಿರೀಶ ಧೋಂಗಡಿ, ಪಾಲಿಕೆ ಅಭಿವೃದ್ಧಿ ವಿಭಾಗದ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ, ಆಡಳಿತ ವಿಭಾಗದ ಉಪ ಆಯುಕ್ತ ಉದಯಕುಮಾರ ಟಿ.ಬಿ., ನಗರ ಯೋಜನಾಧಿಕಾರಿ ವಾಹಿದ ಅಖ್ತರ್, ಅಭಿಯಂತರ ಅನೂಪ ಇತರರಿದ್ದರು.