ದೇವರಡ್ಡೇರಹಟ್ಟಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಶಂಕರ ಗಡದೆ, ಶೇಖರ ಕನಕರೆಡ್ಡಿ, ಲಕ್ಷ್ಮಣ ಮೆಟಗುಡ್ಡ ಇತರರಿದ್ದರು.
ಅಥಣಿ ಗ್ರಾಮೀಣ: ಹಿಪ್ಪರಗಿ ಆಣೆಕಟ್ಟೆಯ 22ನೇ ಗೇಟ್ ಈಚೆಗೆ ಮುರಿದು ಸುಮಾರು 2 ಟಿಎಂಸಿ ನೀರು ವ್ಯರ್ಥವಾಗುತ್ತಿದೆ. ಬೇಸಿಗೆಯಲ್ಲಿ ಕೃಷ್ಣಾ ನದಿ ದಂಡೆಯ ಜಮಖಂಡಿ, ಅಥಣಿ, ಕಾಗವಾಡ, ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ 700 ಹಳ್ಳಿಯ ಜನರಿಗೆ ಹಾಗೂ 3 ಲಕ್ಷ ಹೆಕ್ಟೇರ್ ಭೂ ಪ್ರದೇಶದ ರೈತರಿಗೆ ನೀರಿನ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ದೇವರಡ್ಡೆರಹಟ್ಟಿ ಗ್ರಾಮದಲ್ಲಿ ಶನಿವಾರ 31 ಲಕ್ಷ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮಹಾರಾಷ್ಟ್ರದ ಕೊಯ್ನ ಜಲಾಶಯದಿಂದ ಹಿಪ್ಪರಗಿ ಆಣೆಕಟ್ಟೆಗೆ ನೀರು ಬಿಡಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಜತೆಗೆ ಚರ್ಚಿಸಿ ಮುಖ್ಯಮಂತ್ರಿಗಳಿಂದ ಮಹಾರಾಷ್ಟ್ರ ಸಿಎಂಗೆ ಪತ್ರ ಬರೆದು 2 ಟಿಎಂಸಿ ನೀರು ಬಿಡಿಸಲಾಗುವುದು ಎಂದರು.
6 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದ ಹಿಪ್ಪರಗಿ ಆಣೆಕಟ್ಟೆ 4 ಗೇಟ್‌ಗಳ ನಿರ್ವಹಣೆ ಉಳಿದ ಹಿನ್ನೆಲೆಯಲ್ಲಿ 22ನೇ ಗೇಟ್ ಒತ್ತಡಕ್ಕೆ ಮುರಿದು ನೀರು ಹರಿದಿದೆ. ಈಗ ಹೊಸಪೇಟೆ, ಹೈದ್ರಾಬಾದ್, ಮಹಾರಾಷ್ಟ್ರದಿಂದ ನುರಿತ ತಜ್ಞರನ್ನು ಕರೆಯಿಸಿ ದುರಸ್ತಿ ಮಾಡಲಾಗುತ್ತಿದೆಯಾದರೂ, 100ರಿಂದ 150 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ. ಪತ್ರಕ್ಕೆ ಮಹಾರಾಷ್ಟ್ರ ಸರಿಯಾಗಿ ಸ್ಪಂದಿಸದಿದ್ದಲ್ಲಿ ಫೆಬ್ರವರಿಯಲ್ಲಿ ಸಿಎಂ, ಡಿಸಿಎಂ ಜತೆಗೂಡಿ ಮಹಾರಾಷ್ಟ್ರ ಸಿಎಂ ಮತ್ತು ನೀರಾವರಿ ಸಚಿವರನ್ನು ಭೇಟಿ ಮಾಡಲಾಗುವುದು. ಆಗಲೂ ನೀರು ಬಿಡದಿದ್ದರೆ ಸರ್ಕಾರದಿಂದ ಹಣ ಬಿಡುಗಡೆಗೊಳಿಸಿ ಆಣೆಕಟ್ಟೆಗೆ ನೀರು ಬಿಡಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷ ಶಂಕರ ಗಡದೆ ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಕ್ಷೇತ್ರದ ಜನರಿಗಷ್ಟೇ ಅಲ್ಲದೆ ನೆರೆ ತಾಲೂಕಿನ ಜನರ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು. ಶೇಖರ ಕನಕರೆಡ್ಡಿ, ಸುರೇಶ ಗುಳಪ್ಪನವರ, ಲಕ್ಷ್ಮಣ ಮೆಟಗುಡ್ಡ, ಅರ್ಜುನ ನಾಯಿಕ, ವಿನಾಯಕ ಬಾಗಡೆ, ಶಿವು ನಾಯಿಕ, ಅಮೋಘ ಖೋಬ್ರಿ, ಸಿದ್ದು ನಾಯಿಕ, ಗೋಪಾಲ ಅಸ್ಕಿ, ಸುರೇಶ ಈಚೇರಿ, ಸಂಜು ಹನುಮಾಪುರೆ, ಪರಶುರಾಮ ಪೋಳ ಇತರರಿದ್ದರು.