ಸವದತ್ತಿ ತಹಸೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮುಂಜಾಗ್ರತಾ ಸಭೆ ಜರುಗಿತು. ಡಾ.ರವಿ ಸಾಲಿಗೌಡ್ರ, ಮಲ್ಲಿಕಾರ್ಜುನ ಹೆಗ್ಗನ್ನವರ, ಶಿವಪ್ರಕಾಶ ಪಾಟೀಲ, ರಮೇಶ ಹಾವರಡ್ಡಿ, ಅಮೃತ ಸಾಣಿಕೊಪ್ಪ ಇತರರಿದ್ದರು.
ಸವದತ್ತಿ: ಮುಂಗಾರು ಹಂಗಾಮಿನಲ್ಲಿ ಸಂಭವಿಸಬಹುದಾದ ಅತಿವೃಷ್ಟಿ, ಪ್ರವಾಹ ಹಾಗೂ ಬರಗಾಲ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಎಲ್ಲ ಇಲಾಖೆ ಸಜ್ಜಾಗಿರಬೇಕು ಎಂದು ತಾಲೂಕು ನೋಡಲ್ ಅಧಿಕಾರಿ ಡಾ.ರವಿ ಸಾಲಿಗೌಡ್ರ ಸೂಚಿಸಿದರು.
ತಹಸೀಲ್ದಾರ್ ಕಾರ್ಯಾಲಯ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರವಾಹ ಸಿದ್ಧತೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮುಂಗಾರು ಮಳೆಯ ಮುನ್ಸೂಚನೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಚರಂಡಿ ಹಾಗೂ ಕಾಲುವೆಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮಕೈಗೊಳ್ಳುವ ಮೂಲಕ ಪ್ರವಾಹದ ಅಪಾಯ ತಗ್ಗಿಸಬೇಕು ಎಂದರು.
ನದಿ ತೀರದ ಗ್ರಾಮಗಳು ಹಾಗೂ ಈ ಹಿಂದೆ ಪ್ರವಾಹಕ್ಕೆ ಒಳಗಾಗಿದ್ದ ಪ್ರದೇಶ ಗುರುತಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಸಂಬಂಧಿತ ಇಲಾಖೆಗಳು ಎಚ್ಚರ ವಹಿಸಬೇಕು. ಅಗ್ನಿಶಾಮಕ ದಳವು ಅಗತ್ಯ ಸುರಕ್ಷತಾ ಉಪಕರಣಗಳೊಂದಿಗೆ ಸದಾ ಸನ್ನದ್ಧವಾಗಿರಬೇಕು. ಗೃಹರಕ್ಷಕ ದಳದ ಸಿಬ್ಬಂದಿಯೂ ತುರ್ತು ಸೇವೆಗಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ, ನದಿ ತೀರದ ಗ್ರಾಮಗಳಲ್ಲಿ ಅಗತ್ಯ ಬೋಟ್‌ಗಳನ್ನು ಸಿದ್ಧವಾಗಿರಿಸಬೇಕು. ಆರೋಗ್ಯ ಕೇಂದ್ರಗಳಲ್ಲಿ ಔಷಧ ಸಂಗ್ರಹ, ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಕ್ರಮಕೈಗೊಳ್ಳಬೇಕು ಎಂದರು.
ಗ್ರೇಡ-2 ತಹಸೀಲ್ದಾರ್ ಎಂ.ಎನ್.ಮಠದ, ಪಿಡಬ್ಲುೃಡಿ ಎಇಇ ವಿಜಯ ಸಂಗಪ್ಪಗೋಳ, ಪಿಎಸ್‌ಐ ಲಕ್ಷ್ಮಣ ಗೌಡಿ, ಕೃಷಿ ಅಧಿಕಾರಿ ಶಿವಪ್ರಕಾಶ ಪಾಟೀಲ, ತೋಟಗಾರಿಕೆ ಹಿರಿಯ ನಿರ್ದೇಶಕ ರಮೇಶ ಹಾವರಡ್ಡಿ, ಸಿಡಿಪಿಒ ಅಮೃತ ಸಾಣಿಕೊಪ್ಪ, ಸಮಾಜಕಲ್ಯಾಣ ಇಲಾಖೆಯ
ಆರ್.ಆರ್.ಕುಲಕರ್ಣಿ, ಬಿಸಿಎಂ ರತ್ನಾ ಕದಂ, ಸಜ್ಜನಶೆಟ್ಟಿ,
ಡಾ.ಶ್ರೀಪಾದ ಸಬ್ನಿಸ ಇತರರಿದ್ದರು.