ಬೆಳಗಾವಿಯಲ್ಲಿ ಶುಕ್ರವಾರ ಜರುಗಿದ ಮಹಿಳಾ ಸಮಾವೇಶದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿದ್ಯಾ ಮುರಕುಂಬಿ, ಡಾ.ಶೋಭನಾ ಪಟ್ಟೇದ, ಡಾ.ನೀತಾ ದೇಶಪಾಂಡೆ ಇದ್ದರು. 
ಬೆಳಗಾವಿ

ಮಹಿಳೆಯರ ರಾಜಕೀಯ ಬೆಳವಣಿಗೆ ಸುಲಭವಲ್ಲ

ಬೆಳಗಾವಿ: ನಾನು ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸಿ, ಹಲವು ಏಳು- ಬೀಳು ಕಂಡಿದ್ದರೂ ಸಚಿವೆಯಾಗುವ ಮಟ್ಟಕ್ಕೆ ಬೆಳೆದಿರುವೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಾನೇ ಸಾಕ್ಷಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಇಲ್ಲಿನ ಉದ್ಯಮಬಾಗದಲ್ಲಿನ ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ಮಹಿಳೆಯರಿಗೆ ರಾಜಕೀಯ ಸುಲಭವಲ್ಲ. ಜಿಪಂ ಚುನಾವಣೆಗೆ ನಿಲ್ಲಲು ಟಿಕೆಟ್ ಕೇಳಿದಾಗ ಕೊಡಲಿಲ್ಲ. 2007ರಲ್ಲಿ ಬೆಳಗಾವಿ ಪಾಲಿಕೆ, 2009ರಲ್ಲಿ ಬೆಳಗಾವಿ ಲೋಕಸಭೆಗೂ ಟಿಕೆಟ್ ಸಿಗಲಿಲ್ಲ. ಇದನ್ನೇ ಸವಾಲಾಗಿ ಸ್ವೀಕರಿಸಿ, ವೈಯಕ್ತಿಕವಾಗಿ ಪ್ರಬಲವಾದೆ. ಈಗ ಸಚಿವೆಯಾಗಿರುವೆ. ಮುಂದೆ ಲೋಕಸಭಾ ಸದಸ್ಯೆಯಾಗುವುದು ದೊಡ್ಡ ಕನಸು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆಯಾದಾಗ ಬೇರು ಮಟ್ಟದಲ್ಲಿ ಪಕ್ಷ ಸಂಘಟಿಸಿದ ಫಲವಾಗಿ 2013ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟರು. ಮೂಲತಃ ಖಾನಾಪುರದವಳು. ಇದರಿಂದಾಗಿಯೇ ನನಗೆ ಪ್ರಚಾರ ಮಾಡಲು ಸರಿಯಾಗಿ ಬೆಂಬಲ ಸಿಗಲಿಲ್ಲ. ಆದರೂ ಹೋರಾಡಿದ್ದರಿಂದ ಕಡಿಮೆ ಅಂತರದಿಂದ ಸೋತೆ. 2014ರಲ್ಲಿ ಲೋಕಸಭೆ ಚುನಾವಣೆಗೆ ಟಿಕೆಟ್ ಸಿಕ್ಕಿತು. ಮೋದಿ ಅಲೆಯಲ್ಲಿ ಸೋಲಬೇಕಾಯಿತು. ಸತತ ಎರಡು ಚುನಾವಣೆಗಳಲ್ಲಿ ಸೋತರೂ ಧೃತಿಗೆಡಲಿಲ್ಲ. 2018ರಲ್ಲಿ ಒಂದು ಲಕ್ಷದ 10 ಸಾವಿರ ಮತ ಪಡೆದು 52 ಸಾವಿರ ಮತಗಳ ಅಂತರದಿಂದ ಗೆದ್ದೆ ಎಂದರು.
ರವೀಂದ್ರ ಎನರ್ಜಿ ಲಿಮಿಟೆಡ್‌ನ ವಿದ್ಯಾ ಮುರಕುಂಬಿ, ಪಟ್ಟೇದ ಫರ್ಟಿಲಿಟಿ ಮತ್ತು ರಿಸರ್ಚ್ ಸೆಂಟರ್ ನಿರ್ದೇಶಕಿ ಡಾ.ಶೋಭನಾ ಪಟ್ಟೇದ, ಸೆಂಟ್ರಾಕೇರ್ ಆಸ್ಪತ್ರೆ ವೈದ್ಯಕೀಯ ನಿರ್ದೇಶಕಿ ಡಾ.ನೀತಾ ದೇಶಪಾಂಡೆ, ಡಾ.ಹಿತಾ ಹೆಬ್ಬಾಳ್ಕರ್ ಇತರರಿದ್ದರು.
ಕಾಮಗಾರಿಗೆ ಚಾಲನೆ: ಕುವೆಂಪು ನಗರದ 3 ಮುಖ್ಯ ರಸ್ತೆ, 2 ಉಪ ರಸ್ತೆಗಳ ಡಾಂಬರೀಕರಣ ಮತ್ತು ಪೇವರ್ಸ್ ಅಳವಡಿಕೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ಭೂಮಿಪೂಜೆ ನೆರವೇರಿಸಿದರು.