ಬೆಳಗಾವಿ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ಮಂಗಲಾ ಮೆಟಗುಡ್ಡ, ವಿದ್ಯಾಶ್ರೀ ರಜಪೂತ, ಬಿ.ಬಿ.ಮಠಪತಿ, ಅ.ಬ.ಇಟಗಿ, ಇಂದಿರಾ ಮೂಟೆಬೆನ್ನೂರು, ಶ್ರೀರಂಗ ಜೋಶಿ, ರಮೇಶ ಬಾಗೇವಾಡಿ ಇತರರಿದ್ದರು.
ಬೆಳಗಾವಿ : ಶತಮಾನದ ಇತಿಹಾಸವಿರುವ ಕನ್ನಡ ಸಾಹಿತ್ಯ, ಅದರಲ್ಲೂ ಕವಿಗಳ ಅಂತರಾಳದಿಂದ ಹೊರಹೊಮ್ಮಿದ ಕಾವ್ಯ ಸಾಹಿತ್ಯವು ಜೀವನಕ್ಕೆ ಚೈತನ್ಯ ತುಂಬುವ ಶಕ್ತಿ ಹೊಂದಿದೆ ಎಂದು ಸಾಹಿತಿ ವಿದ್ಯಾಶ್ರೀ ರಜಪೂತ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಈಚೆಗೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಮತ್ತು ಕನ್ನಡ ಸಾಂಸ್ಕೃತಿಕ ಭವನ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ನಿರಂತರ ಸಾಹಿತ್ಯ ಕಾರ್ಯಕ್ರಮ ಮೂಲಕ ಕವಿ ಮನಸ್ಸುಗಳಿಗೆ ಉತ್ಸಾಹ ತುಂಬುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಜಿಲ್ಲಾ ಘಟಕದ ವತಿಯಿಂದ ನಿರಂತರವಾಗಿ ಸಾಹಿತ್ಯಿಕ ಚಟುವಟಿಕೆ ನಡೆಯುತ್ತಿದ್ದು, ಪ್ರತಿ ತಿಂಗಳೂ ಉದಯೋನ್ಮುಖ ಕವಿ-ಕವಯಿತ್ರಿಯರಿಂದ ಕವಿಗೋಷ್ಠಿ ಹಮ್ಮಿಕೊಂಡು ಪ್ರೇರಣೆ ನೀಡಲಾಗುತ್ತಿದೆ ಎಂದರು.
ಸಾಹಿತಿ ಶ್ರೀಶೈಲ ಹೆಬ್ಬಳ್ಳಿ ಬರೆದ ‘ಕಾಡುವ ಕಾಲ್ಗೆಜ್ಜೆ ನಾದ ಗಜಲ್’ ಕೃತಿ ಬಿಡುಗಡೆಗೊಳಿಸಲಾಯಿತು. ಸಾಹಿತಿಗಳಾದ ಬಿ.ಬಿ.ಮಠಪತಿ, ಅ.ಬ.ಇಟಗಿ, ಇಂದಿರಾ ಮೂಟೆಬೆನ್ನೂರು, ಶ್ರೀರಂಗ ಜೋಶಿ, ರಮೇಶ ಬಾಗೇವಾಡಿ, ನಿತಿನ ಮೆಣಸಿನಕಾಯಿ, ಸಚಿನ ಸಂಪಗಾಂವಿ, ಸಂತೋಷ ಮಠಪತಿ, ಶಿವಾನಂದ ತಲ್ಲೂರ,ಎಂ.ವೈ.ಮೆಣಸಿನಕಾಯಿ ಇತರರಿದ್ದರು.