ಬೆಳಗಾವಿಯಲ್ಲಿ ಮಂಗಳವಾರ ರಾಷ್ಟ್ರೀಯ ಕೌಶಲ ತರಬೇತಿ ಪಾಲುದಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಗಿರಿರಾಜ ಶಿರಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಾ.ಸಂಧ್ಯಾ, ಶಶಿಕುಮಾರ, ರವೀಶ ಇದ್ದಾರೆ.
ಬೆಳಗಾವಿ : ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ) 4.0 ಅಡಿ ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯ ಹಾಗೂ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮದ ಮೂಲಕ ಲಕ್ಷಾಂತರ ಯುವಕ, ಯವತಿಯರಿಗೆ ತರಬೇತಿ ನೀಡಿ ಒಂದೂವರೆ ವರ್ಷವಾದರೂ ಈವರೆಗೂ ತರಬೇತಿ ಪಾಲುದಾರ ಕೇಂದ್ರ ಬಾಕಿ ಅನುದಾನ ಬಿಡುಗಡೆಗೊಳಿಸಿಲ್ಲ ಎಂದು ರಾಷ್ಟ್ರೀಯ ಕೌಶಲ ತರಬೇತಿ ಪಾಲುದಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಗಿರಿರಾಜ ಶಿರಗೆ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಂಕೆವಿವೈ 4.0 ಅಡಿಯಲ್ಲಿ ದೇಶಾದ್ಯಂತ ಒಟ್ಟು 11 ಸಾವಿರ ಕ್ಕೂ ಹೆಚ್ಚು ತರಬೇತಿ ಪಾಲುದಾರ ಕೇಂದ್ರಗಳು ಕಾರ್ಯನಿರ್ವಹಿಸಿವೆ. ಸುಮಾರು 900 ಕೋಟಿ ರೂ. ಬಾಕಿ ಸರ್ಕಾರ ಉಳಿಸಿಕೊಂಡಿದೆ. ಕೈಯಿಂದ ಹಣ ಹಾಕಿ ತರಬೇತಿ ನೀಡಿದ್ದೇವೆ. ತರಬೇತಿ ಪಡೆದುವರೆಲ್ಲ ಬೇರೆ ಬೇರೆ ಕಡೆ ಉದ್ಯೋಗ ಪಡೆದು, ಜೀವನ ರೂಪಿಸಿಕೊಂಡಿದ್ದಾರೆ. ಆದರೆ ಇದಕ್ಕಾಗಿ ಶ್ರಮಿಸಿದ ತರಬೇತಿ ಪಾಲುದಾರರು ಹಣವಿಲ್ಲದೇ ಸಂಸ್ಥೆಗಳನ್ನು ನಿರ್ವಹಿಸುವುದೇ ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡರು.
ಈ ಯೋಜನೆಯಡಿ ಪಾಲುದಾರ ಕೇಂದ್ರಗಳಿಗೆ ಮೂರು ಕಂತಿನಲ್ಲಿ ಹಣ ಬರಬೇಕಿತ್ತು. ನೋಂದಣಿ ಪೂರ್ಣಗೊಂಡಾಗ ಶೇ.30, ತರಬೇತಿ ಆರಂಭಿಸಿದಾಗ ಶೇ.30 ಹಾಗೂ ಪೂರ್ಣಗೊಂಡಾಗ ಉಳಿದ ಶೇ.40ರಷ್ಟು ಹಣ ಬಿಡುಗಡೆ ಮಾಡುವ ನಿಯಮಿತು. ಈವರೆಗೂ ಒಂದು ಕಂತಿನ ಹಣವೂ ಬಂದಿಲ್ಲ. ತಕ್ಷಣವೇ ಬಾಕಿ ಬಿಡುಗಡೆ ಮಾಡಬೇಕು. ಸಮಯೋಚಿತ ಹಾಗೂ ಶಾಶ್ವತ ನಿಧಿ ಹರಿವು ವ್ಯವಸ್ಥೆ ರೂಪಿಸಬೇಕು. ನಿಷ್ಠಾವಂತ ಮತ್ತು ಅನುಭವ ಹೊಂದಿರುವ ತರಬೇತಿ ಪಾಲುದಾರರಿಗೆ ಹೊಸ ಗುರಿಗಳನ್ನು ನೀಡಬೇಕು. ನೆಲಮಟ್ಟದ ಅನುಷ್ಠಾನಕಾರರೊಂದಿಗೆ ನೇರ ಸಂವಹನ ಬಲಪಡಿಸಬೇಕು. ಪಾವತಿ ವಿಳಂಬಗಳಿಗಾಗಿ ಸಂರಚಿತ ದೂರು ನಿವಾರಣಾ ವ್ಯವಸ್ಥೆ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಅಧ್ಯಕ್ಷೆ ಡಾ.ಸಂಧ್ಯಾ ಆರ್., ರಾಜ್ಯ ಕಾರ್ಯದರ್ಶಿ ಶಶಿಕುಮಾರ ಎಚ್.ಬಿ, ಖಜಾಂಚಿ ರವೀಶ ಕೆ.ಪಿ ಇದ್ದರು.