ನಗರದ ಪಾಲಿಕೆ ಸಭಾಂಗಣದಲ್ಲಿ ಆಯುಕ್ತ ಕಾರ್ತಿಕ್ ಎಂ., ಉಪ ಆಯುಕ್ತ ಸಿದ್ದು ಹುಳ್ಳೊಳ್ಳಿ ಅಧ್ಯಕ್ಷೆಯಲ್ಲಿ ಸಭೆ
ನಗರದಲ್ಲಿ ಸರ್ಕಾರಿ, ಖಾಸಗಿ ಸ್ಥಳಗಳಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು ಕಾರ್ಯಚರಣೆ ಚುರುಕುಗೊಳಿಸಿರುವ ಮಹಾನಗರ ಪಾಲಿಕೆಯು ಇದೀಗ ಬ್ಯಾನರ್ ಮುದ್ರಣ (ಪ್ರಿಂಟಿಂಗ್) ಮಾಲೀಕರಿಗೂ ಎಚ್ಚರಿಕೆ ನೀಡಿದೆ.
ನಗರದ ಪಾಲಿಕೆ ಸಭಾಂಗಣದಲ್ಲಿ ಆಯುಕ್ತ ಕಾರ್ತಿಕ್ ಎಂ., ಉಪ ಆಯುಕ್ತ ಸಿದ್ದು ಹುಳ್ಳೊಳ್ಳಿ ಅಧ್ಯಕ್ಷೆಯಲ್ಲಿ ಮಂಗಳವಾರ ನಡೆದ ಬ್ಯಾನರ್, ಫ್ಲೆಕ್ಸ್ ಮುದ್ರಣ ಮಾಲೀಕರ ಸಭೆಯಲ್ಲಿ ಹಲವು ಷರತ್ತು, ನಿಬಂಧನೆ ಕುರಿತು ನಿರ್ದೇಶನ ನೀಡಿದರು.
ಪಾಲಿಕೆಯ 58 ವಾರ್ಡ್‌ಗಳ ವ್ಯಾಪ್ತಿಯ ಜನವಸತಿ, ಮಾರುಕಟ್ಟೆ, ಮುಖ್ಯ ರಸ್ತೆ, ವೃತ್ತಗಳು ಸೇರಿ 250ಕ್ಕೂ ಅಧಿಕ ರಾಜಕೀಯ ಪಕ್ಷದ ಮುಖಂಡರು, ಸಚಿವರು, ಶಾಸಕರು, ಸಂಸದರು, ವಿವಿಧ ಸಂಘಟನೆಗಳ ಪದಾಧಿಕಾರಿಗಳ, ವಾಣಿಜ್ಯ ಕಂಪನಿಗಳ ಜಾಹಿರಾತು ಫ್ಲೆಕ್ಸ್, ಬ್ಯಾನರ್ ಅಳವಡಿಸಲಾಗಿದೆ. ಆದರೆ, ಬಹುತೇಕ ಭಾಗಗಳಲ್ಲಿ ಪಾಲಿಕೆ ಅನುಮತಿ ಪಡೆದುಕೊಳ್ಳದೆ ಅಳವಡಿಸಲಾಗುತ್ತಿದೆ. ಇದರಿಂದ ಪಾಲಿಕೆಗೆ ತೆರಿಗೆ ನಷ್ಟವಾಗುವುದರ ಜತೆಗೆ ನಗರದ ಸೌಂಧರ್ಯ ಹಾಳಾಗುತ್ತಿದೆ. ಈ ಹಿನ್ನೆಲೆ ಫ್ಲೆಕ್ಸ್, ಬ್ಯಾನರ್ ಅಳವಡಿಕೆ ಪಾಲಿಕೆ ಅನುಮತಿ ಕಡ್ಡಾಯಗೊಳಿಸಲಾಗಿದೆ.
ಈಗಾಗಲೇ ಬ್ಯಾನರ್, ಫ್ಲೆಕ್ಸ್ ಮುದ್ರಣ ಮಾಲೀಕರಿಗೇ ಪಾಲಿಕೆ ಅನುಮತಿ ಪತ್ರ ಇಲ್ಲದೆ ಬ್ಯಾನರ್, ಫ್ಲೆಕ್ಸ್ ಮುದ್ರಣ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿ ಮುದ್ರಿಸಿದ ದಂಡ ಜತೆಗೆ ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ. ಹೀಗಾಗಿ ಮುದ್ರಣಕ್ಕಿಂತ ಮುಂಚೆಯೇ ಪಾಲಿಕೆ ಪರವಾನಗಿ ಪರಿಶೀಲನೆ ನಡೆಸಬೇಕು ಎಂದು ಪಾಲಿಕೆ ಕಂದಾಯ ವಿಭಾಗ ಆಯುಕ್ತ ಸಿದ್ದು ಹುಳ್ಳೊಳ್ಳ ಸೂಚಿಸಿದರು.
ನಗರದಲ್ಲಿ ಫ್ಲೆಕ್ಸ್ ಅಳವಡಿಕೆ, ಬ್ಯಾನರ್ ಕಟ್ಟೋಕೆ ಪಾಲಿಕೆಯಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ.ಯಾವುದೇ ಸಂಘ ಸಂಸ್ಥೆ, ರಾಜಕೀಯ ಪಕ್ಷದಾಗಿರಲಿ ಅನುಮತಿ ತೆಗೆದುಕೊಳ್ಳಬೇಕು. ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮುದ್ರಣ ಮಾಡದಂತೆ ಮಾಲೀಕರಿಗೆ ಸೂಚನೆ ನೀಡಲಾಗಿದೆ.
ಕಾರ್ತಿಕ ಎಂ. ಪಾಲಿಕೆ ಆಯುಕ್ತ