- ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿತ್ತಿ ಪತ್ರಗಳನ್ನು ಸುಭಾಷ ಪಾಟೀಲ, ರಮೇಶ ದೇಶಪಾಂಡೆ ಬಿಡುಗಡೆಗೊಳಿಸಿದರು. ಬಿಜೆಪಿ ಮುಖಂಡ ಮುರೇಂದ್ರಗೌಡ ಪಾಟೀಲ.ಸಚಿನ್ ಕಡಿ ಇತರರಿದ್ದರು.
ಬೆಳಗಾವಿಕಾಂಗ್ರೆಸ್‌ನ ಸಾವಿರ ದಿನ ವೈಫಲ್ಯ, ಭ್ರಷ್ಟಾಚಾರ ಆಡಳಿತದಿಂದ ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಸಮಸ್ಯೆ ಸೃಷ್ಟಿಯಾಗಿವೆ. ಅಭಿವೃದ್ಧಿ ಸ್ಥಗೀತಗೊಂಡಿದ್ದು, ಜನಸಾಮಾನ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಸಾವಿರ ದಿನ ಸಂಭ್ರಮ ಆಚರಿಸುತ್ತಿದೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಟೀಕಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊಲೆ, ಸೂಲಿಗೆ, ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಖಾತೆ ನಿರ್ವಹಣೆಯಲ್ಲಿ ವಿಫಲರಾಗಿದ್ದು, ಪೊಲೀಸ್ ಠಾಣೆಗೆ ದೂರು ಕೊಡಲು ಜನರು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ. ದೌರ್ಜನ್ಯ, ಅತ್ಯಾಚಾರಿಗಳ ರಕ್ಷಣೆಗೆ ಪೊಲೀಸರು ನಿಂತುಕೊಂಡಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಹೊತ್ತಿರುವ ಮುಡಾ ಹಗರಣ, ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಲೂಟಿ, 15,568 ಕೋಟಿ ರೂ. ಮೌಲ್ಯದ ಸ್ಮಾರ್ಟ್ ಮೀಟರ್ ಹಗರಣ. ಅಬಕಾರಿ ಇಲಾಖೆ ನೂರಾರು ಕೋಟಿ ರೂ. ಹಗರಣ ನಡೆದಿದೆ. ಗ್ಯಾರಂಟಿ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಸರ್ಕಾರಿ ನೌಕರರಿಗೆ, ಅಭಿವೃದ್ಧಿ ನಿಗಮಗಳಿಗೆ ಹಣ ನೀಡಲು ಸಾಧ್ಯವಾಗದೆ ಪರದಾಡುತ್ತಿದೆ. ಈ ನಡುವೆ ಗೃಹಲಕ್ಷ್ಮೀ 5 ಸಾವಿರ ಕೋಟಿ ರೂ. ಹಣ ದುರ್ಬಳಕೆ ಆಗಿದೆ ಎಂದು ದೂರಿದರು.
ಕಳೆದ ಎರಡೂವರೆ ವರ್ಷದಲ್ಲಿ ಮರಣ ಪ್ರಮಾಣ ಪತ್ರದ ಶುಲ್ಕ 2ರಿಂದ 20 ರೂ.ಗೆ ಏರಿಕೆ, ಆಸ್ತಿ ನೋಂದಣಿ, ಮುದ್ರಾಂಕ ಶುಲ್ಕ, ಸಾರಿಗೆ ದರ, ವಿದ್ಯುತ್, ಹಾಲು, ನೀರು, ಬಿತ್ತನೆ ಬೀಜ ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದಿರುವುದು, ಆರ್ಥಿಕ ಸಮಸ್ಯೆ , ಬೆಳೆಸಾಲ ಇತರೆ ಕಾರಣಗಳಿಂದಾಗಿ ಎರಡು ವರ್ಷದ ಅವಧಿಯಲ್ಲಿ 1,886 ರೈತರು ಸಾಧ್ಯವಾಗದೆ ಮೃತಪಟ್ಟಿದ್ದಾರೆ. ರೈತರ ಸಮಸ್ಯೆಗೆ ಸ್ಪಂದಿಸಬೇಕಿದ್ದ ಸರ್ಕಾರ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಎಸ್‌ಸಿ,ಎಸ್‌ಟಿ ನಿಧಿಯಲ್ಲಿ ಮೀಸಲಿಟ್ಟಿದ್ದ 10 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಲಾಗಿದೆ. ಎಸ್‌ಸಿ,ಎಸ್‌ಟಿ ವಿದ್ಯಾರ್ಥಿಗಳ ಶಿಷ್ಯವೇತನ ಸ್ಥಗೀತಗೊಳಿಸಿದೆ. ಲಿಂಗಾಯತ, ಒಕ್ಕಲಿಗರಿಗೆ ನೀಡಿದ ಮೀಸಲಾತಿಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಿದೆ. ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಪ್ರವಾಹ ನಡೆಸಿದೆ ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾ ಉಸ್ತುವಾರಿ ರಮೇಶ ದೇಶಪಾಂಡೆ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ನಾವೆಲ್ಲಾ ಒಗ್ಗಟ್ಟಿನಿಂದಲೇ ಸಂಘಟನೆ ಮಾಡುತ್ತಿದ್ದೇವೆ. ನಮ್ಮಲ್ಲಿ ಹೊಂದಾಣಿಕೆ ರಾಜಕಾರಣ ಇಲ್ಲವೇ ಇಲ್ಲ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿದೆ ಎಂದರು.
ಬಿಜೆಪಿ ಮುಖಂಡ ಮುರೇಂದ್ರಗೌಡ ಪಾಟೀಲ , ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ್ ಕಡಿ ಇತರರಿದ್ದರು.