ಪಟ್ಟಣದ ಶಿವಯೋಗಿ ವೃತ್ತದಲ್ಲಿ ಮಹಿಳೆಯರ ಕುಂಭ ಮೆರವಣಿಗೆ ಮತ್ತು ಆನೆಯ ಮೇಲೆ ಕಲಶದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಅಮೃತಲಿಂಗೇಶ್ವರ ದೇವಸ್ಥಾನ ತಲುಪಿತು.
- ಶಾಸಕ ಲಕ್ಷ್ಮಣ ಅನಿಸಿಕೆ
- ಅಮೃತಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮತ್ತು ಕಲಶದ ಮೆರವಣಿಗೆ
ಅಥಣಿ: ಧಾರ್ಮಿಕ ಸೇವಾಕಾರ್ಯದಿಂದ ಬದುಕಿನಲ್ಲಿ ನೆಮ್ಮದಿ ಕಾಣಬಹುದು. ಇದು ಸಮಾಜಮುಖಿ ಸೇವೆಗೆ ಪ್ರೇರಣೆಯಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಅಮೃತಲಿಂಗೇಶ್ವರ ದೇವಾಲಯದ ಜಿರ್ಣೋದ್ಧಾರ ಮತ್ತು ಕಲಶದ ಮೆರವಣಿಗೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಐತಿಹಾಸಿಕ ಚಾಲುಕ್ಯರ ಶೈಲಿಯಲ್ಲಿರುವ ಅಮೃತಲಿಂಗೇಶ್ವರ ದೇವಾಲಯದ ಶಿವಲಿಂಗ ಅತ್ಯಂತ ಸುಂದರವಾಗಿದೆ. ಇಲ್ಲಿ ಎಲ್ಲ ದೇವಾನುದೇವತೆ ಪ್ರತಿಷ್ಠಾಪಿಸಿರುವುದರಿಂದ ದೇವಲೋಕದ ಸೃಷ್ಟಿ ಕಾಣುತ್ತದೆ. ಇಲ್ಲಿಯ ಭಕ್ತರ ಸೇವೆ ಅಪಾರವಾಗಿದೆ. ಇದರಿಂದ ಭಕ್ತರಿಗೆ ಮಾನಸಿಕ ನೆಮ್ಮದಿ ಸುಖ, ಶಾಂತಿ ಲಭಿಸುತ್ತದೆ ಎಂದರು.
ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಅಮೃತಲಿಂಗೇಶ್ವರ ದೇವಾಲಯಕ್ಕೆ ರೂಪಗೊಂಡು ಹೊಸ ಕಾಯಕಲ್ಪ ನೀಡಿರುವ ಶಿಲ್ಪಿಗಳ ಕಾರ್ಯ ಮೆಚ್ಚುವಂತದು. ಇತಿಹಾಸ ಪ್ರಸಿದ್ಧ ದೇವಾಲಯ ಪಟ್ಟಣದಲ್ಲಿರುವುದು ವಿಶೇಷ, ಇದು ವಿದ್ಯಾರ್ಥಿಗಳ ಅಧ್ಯಯನಕ್ಕೆ ಹೆಚ್ಚು ಉಪಯುಕ್ತವಾಗಿದೆ. ಇಂತಹ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುವುದು ಅಥಣಿ ಜನರ ಸೇವಾಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ, ಅಮಿತ ಮಹಾಜನ, ಸುರೇಶ ಗೊಟಖಿಂಡಿ, ಕಾರ್ತಿಕ ಮಿರಜಕರ, ಸುನೀಲ ಕಾರವೇಕರ, ಅನಿಲ ಬುಲಬುಲೆ, ಪ್ರವೀಣ ಯಳಮಲೆ, ಸಿದ್ದು ಪಾಟೀಲ, ಗುಂಡುರಾವ ಮಿರಜಕರ, ಶಿವಾಜಿ ಕರಾಳೆ, ಸಂತೋಷ ಗುಂಡಾ, ಮಯೂರ ಮಂಗಸೂಳಿ, ಬಾಲಚಂದ್ರ ಮಹಾಜನ, ದೀಪಕ ಪೋತದಾರ, ವಿನಾಯಕ ನೇಸರಗಿ, ಆನಂದ ಟೊನಪಿ ಇತರರಿದ್ದರು.