ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕುವೆಂಪು ಅವರ 121ನೇ ಜನ್ಮದಿನದ ನಿಮಿತ್ತ ಏರ್ಪಡಿಸಿದ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಡಾ.ಬಸವರಾಜ ಜಗಜಂಪಿ ಮಾತನಾಡಿದರು. ಚಂದ್ರಶೇಖರ ನವಲಗುಂದ ಇತರರಿದ್ದರು.
ಬೆಳಗಾವಿ: ಮುಕ್ತ ಛಂದಸ್ಸಿನಲ್ಲಿ ರಚಿತವಾದ ರಾಷ್ಟ್ರಕವಿ ಕುವೆಂಪು ಅವರ ಮಹಾಕಾವ್ಯ ಶ್ರೀರಾಮಾಯಣ ದರ್ಶನಂ ವಾಚನದ ಮೂಲಕ ಅರ್ಥಪೂರ್ಣವಾಗಿ ಅವರ ಜನ್ಮದಿನ ಆಚರಿಸಲಾಗಿದೆ ಎಂದು ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ವಿಶ್ವಸ್ಥ ಮಂಡಳಿ ಮತ್ತು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಕುವೆಂಪು ಅವರ 121ನೇ ಜನ್ಮದಿನದ ನಿಮಿತ್ತ ಏರ್ಪಡಿಸಿದ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಬರಿ ಮತ್ತು ಶ್ರೀರಾಮನ ನಡುವಿನ ಮಾನವೀಯ ಸಂಬಂಧದ ಚಿತ್ರಣವನ್ನು ಮಹಾಕವಿ ಕುವೆಂಪು ಅವರು ಕಟ್ಟಿಕೊಟ್ಟ ರೀತಿ ಅನನ್ಯವಾಗಿದ್ದು, ಅದನ್ನು ಗಮಕ ವಾಚನ ವ್ಯಾಖ್ಯಾನದ ಮೂಲಕ ಶಾಸಿ ಮತ್ತು ಕೋಲಕಾರ ಪಾಂಡಿತ್ಯ ಮೆರೆದಿದ್ದಾರೆ. ಕುವೆಂಪು ಅವರು ಒಂಬತ್ತು ವರ್ಷಗಳ ಕಾಲ ರಚಿಸಿದ ಮಹಾಕಾವ್ಯ ಇದು.
ಇಂಥ ಒಂದು ಅಪರೂಪದ ಕಾರ್ಯಕ್ರಮಕ್ಕೆ ಬಾರದ ಕನ್ನಡ ಅಧ್ಯಾಪಕರು ತಮ್ಮ ಅಂತರಾತ್ಮವನ್ನು ವಿಮರ್ಶಿಸಿಕೊಳ್ಳಬೇಕು ಎಂದರು.ಸಾಹಿತಿ ಎಲ್.ಎಸ್.ಶಾಸ್ತ್ರೀ ಅವರು ಗಮಕ ಶೈಲಿಯಲ್ಲಿ ‘ಶಬರಿಗಾದನು ಅತಿಥಿ ದಾಶರಥಿ’ ಎಂಬ ಕಾವ್ಯಭಾಗವನ್ನು ಹಾಡಿರು. ಪ್ರಾಧ್ಯಾಪಕ ಡಾ.ಹರೀಶ ಕೋಲಕಾರ ಅದಕ್ಕೆ ಅರ್ಥಪೂರ್ಣವಾದ ವಿವರಣೆಯಿತ್ತರು.
ಬಸವರಾಜ ಗಾರ್ಗಿ, ಚಂದ್ರಶೇಖರ ನವಲಗುಂದ, ಆರ್.ಬಿ.ಕಟ್ಟಿ, ಡಾ.ಸಿ.ಕೆ.ಜೋರಾಪುರ, ಪ್ರೊ.ಇಂದಿರಾ ಹೋಳಕರ, ಡಾ.ಎಚ್.ಬಿ.ರಾಜಶೇಖರ, ಡಾ.ರಾಮಕಷ್ಣ ಮರಾಠೆ, ಶಿರೀಷ ಜೋಶಿ, ಡಾ.ಅರವಿಂದ ಕುಲಕರ್ಣಿ, ಡಾ.ಪದ್ಮಾ ಕುಲಕರ್ಣಿ, ಶ್ರೀರಂಗ ಜೋಶಿ, ಮುರುಗೇಶ ಶಿವಪೂಜಿ, ಪ್ರೊ.ಎಂ.ಎಸ್.ಇಂಚಲ, ರೇಖಾ ದೇಸಾಯಿ ಇತರರಿದ್ದರು.