ಬೆಳಗಾವಿಯಲ್ಲಿ ಆರ್‌ಎಲ್‌ಎಸ್ ಕಾಲೇಜಿನಿಂದ ಶನಿವಾರ ಏರ್ಪಡಿಸಿದ್ದ 5ಕೆ ಮ್ಯಾರಾಥಾನ್‌ದಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳೊಂದಿಗೆ ಲೆಫ್ಟಿನೆಂಟ್ ಕರ್ನಲ್ ಪಂಕಜ್ ಕುಗಜಿ, ರಣಜಿತ ಕಣಬರಕರ, ಡಾ.ಜ್ಯೋತಿ ಎಸ್. ಕವಳೇಕರ, ಜಿ.ಎನ್.ಪಾಟೀಲ, ಡಾ.ಶಿವಾನಂದ ಬುಲಬುಲಿ ಇತರರಿದ್ದರು.
ಇಂದಿನ ಯುಗದಲ್ಲಿ ಕ್ರೀಡೆಗೆ ಹಲವು ಅವಕಾಶಗಳಿವೆ. ಪ್ರತಿಯೊಬ್ಬ ವಿದ್ಯಾರ್ಥಿ ಕ್ರೀಡೆಯಲ್ಲಿ ಭಾಗವಹಿಸಿ ಆರೋಗ್ಯವಂತರಾಗಬೇಕು. ಕ್ರೀಡೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸುತ್ತದೆ ಎಂದು 25 ಎನ್‌ಸಿಸಿ ಬಟಾಲಿಯನ್ ಲೆಫ್ಟಿನೆಂಟ್ ಕರ್ನಲ್ ಪಂಕಜ್ ಕುಗಜಿ ಹೇಳಿದರು.
ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯವು ಕ್ರೀಡಾ ವಿಭಾಗ, ಎನ್‌ಸಿಸಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಿಮಿತ್ತ ‘ಆರೋಗ್ಯವಂತ ನಾಳೆಗಾಗಿ ಒಂದು ಓಟ‘ ಘೋಷವಾಕ್ಯದಡಿ ಏರ್ಪಡಿಸಿದ್ದ 5ಕೆ ಮ್ಯಾರಾಥಾನ್‌ಗೆ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಯಿಂದ ಅನೇಕ ರೋಗಗಳಿಂದ ಮುಕ್ತರಾಗಬಹುದು ಅಷ್ಟೇ ಅಲ್ಲದೆ ಕ್ರೀಡಾ ಲೋಕದಲ್ಲಿ ಮಹತ್ವದ ಸಾಧನೆ ಮಾಡಬಹುದು. ಕೆಎಲ್‌ಇ ಸಂಸ್ಥೆಯ ಕ್ರೀಡಾ ವಿಭಾಗದ ವಿದ್ಯಾರ್ಥಿಗಳಿಗೆ ಅನೇಕ ರೀತಿಯ ಪ್ರೋತ್ಸಾಹಗಳನ್ನು ಹಾಗೂ ಅವಕಾಶಗಳನ್ನು ಒದಗಿಸುತ್ತದೆ. ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬಹುದು ಎಂದರು.
ಅಂತರಾಷ್ಟ್ರೀಯ ಕ್ರೀಡಾಪಟು ರಣಜಿತ ಕಣಬರಕರ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆಗೆ ಹಲವು ಪ್ರೋತ್ಸಾಹ ಹಾಗೂ ಅವಕಾಶಗಳಿವೆ. ಒಳಾಂಗಣ ಮತ್ತು ಹೊರಾಂಗಣ ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿ ಪುರಸ್ಕಾರಗಳನ್ನು ಪಡೆಯಬಹುದು. ಕ್ರೀಡಾ ಕ್ಷೇತ್ರದಲ್ಲಿ ಅನೇಕ ಕ್ರೀಡಾಪಟುಗಳಿಗೆ ಅವಕಾಶಗಳಿವೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಪಡೆಯಬಹುದೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಾ.ಜ್ಯೋತಿ ಎಸ್. ಕವಳೇಕರ ಮಾತನಾಡಿ, ಪಠ್ಯದ ಜತೆಗೆ ಕ್ರೀಡೆಗಳಿಗೆ ಹೆಚ್ಚು ಮಹತ್ವ ಕೊಡಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮಹಾವಿದ್ಯಾಲಯದಲ್ಲಿ ಮೊದಲಿನಿಂದಲೂ ಕ್ರೀಡೆಗೂ ಪ್ರಾಶಸ್ತ್ಯ ಕೊಡುತ್ತ ಬರಲಾಗಿದೆ ಎಂದು ವಿವರಿಸಿದರು.
ಕ್ರೀಡಾ ವಿಭಾಗದ ನಿವೃತ್ತ ನಿರ್ದೇಶಕ ಜಿ.ಎನ್.ಪಾಟೀಲ, ನಿರ್ದೇಶಕ ಡಾ.ಶಿವಾನಂದ ಬುಲಬುಲಿ. ವಾಯುದಳ ಅಧಿಕಾರಿ ಪ್ರೊ. ಎಚ್.ಎನ್.ಬನ್ನೂರ, ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಶಶಿಕಾಂತ ತಾರದಾಳೆ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಐಕ್ಯೂಎಸಿ ಸಂಯೋಜಕ ಡಾ.ವಿನಯ ಕುಮಾರ ಎಂ., ಡಾ.ಮಹೇಶ ಗುರನಗೌಡರ, ಡಾ.ರವಿ ಖೋತ. ಡಾ.ರೀಚಾ ರಾವ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಚ್.ಎನ್.ಚುಳುಕಿ, ಕಾಲೇಜಿನ ಎಲ್ಲ ಸಿಬ್ಬಂದಿ ಇದ್ದರು.
ಆರ್‌ಎಲ್‌ಎಸ್ ಕಾಲೇಜಿನಿಂದ ಆರಂಭಗೊಂಡ ಓಟವು ಕಿತ್ತೂರು ಚನ್ನಮ್ಮ ವೃತ್ತ, ಕ್ಲಬ್ ರಸ್ತೆ, ಮಹಾತ್ಮಾ ಗಾಂಧಿ ವೃತ್ತ, ಕ್ಯಾಟಲ್ ರಸ್ತೆ, ಯುನಿಯನ್ ಜಿಮಖಾನ ಮೂಲಕ ಸಂಚರಿಸಿ ಪುನಃ ಆರ್‌ಎಲ್‌ಎಸ್ ಆವರಣದಲ್ಲೇ ಸಮಾರೋಪಗೊಂಡಿತು. ನಗರದ ವಿವಿಧ ಕಾಲೇಜ್‌ಗಳ 200ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.