ಬೆಳಗಾವಿಯ ಮಾರುತಿ ಗಲ್ಲಿಯಲ್ಲಿ ಸಮ ಸಂಖ್ಯೆ ದಿನವಾದ ಭಾನುವಾರ ಬೆಸ ಸಂಖ್ಯೆ ಜಾಗದಲ್ಲಿ ವಾಹನಗಳನ್ನು ಪಾರ್ಕ್ ಮಾಡಿರುವುದು.
ನಗರದ ಸಂಚಾರ ಸಿಕ್ಕು(ದಟ್ಟಣೆ) ನಿಯಂತ್ರಿಸಲು, ಸಗಮ ಸಂಚಾರಕ್ಕಾಗಿ ಜಾರಿಗೆ ತಂದಿರುವ ಸಮ ಮತ್ತು ಬೆಸ ದಿನಾಂಕಗಳ ಆಧಾರದ ವಾಹನಗಳ ನಿಲುಗಡೆ ನಿಯಮ ನಗರದಲ್ಲಿ ಪಾಲನೆಯಾಗುತ್ತಿಲ್ಲ. ನಿತ್ಯವೂ ರಸ್ತೆಯ ಎರಡೂ ಬದಿಗೆ ಬೈಕ್ ಮತ್ತು
ಕಾರುಗಳನ್ನು ಪಾರ್ಕ್ ಮಾಡುತ್ತಿದ್ದು, ಸೂಚನಾ ಫಲಕಗಳು ಇದ್ದೂ ಇಲ್ಲದಂತಾಗಿವೆ.
ಈ ಮೊದಲು ಎರಡೂ ಬದಿಯಲ್ಲಿ ಬೈಕ್‌ಗಳನ್ನು ನಿಲ್ಲಿಸುತ್ತಿದ್ದರಿಂದ ಸಂಚಾರ ಸಿಕ್ಕು ಉಂಟಾಗುತ್ತಿತ್ತು. ಹೀಗಾಗಿ, ಜನನಿಬಿಡ ಪ್ರದೇಶಗಳಾದ ಖಡೇಬಜಾರ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಶನಿವಾರಕೂಟ-ಕಾಕತಿವೇಸ್, ಗಣಪತಿ ಗಲ್ಲಿ, ಹೇಮು ಕಲಾನಿ ವೃತ್ತದಿಂದ-ಪೋಸ್ಟ್‌ಮನ್ ಸರ್ಕಲ್, ಸಮಾದೇವಿ ಗಲ್ಲಿಗಳಲ್ಲಿ ಸಮ ಮತ್ತು ಬೆಸ್ ದಿನಾಂಕಗಳ ಆಧಾರದ ಮೇಲೆ ಬೈಕ್ ನಿಲ್ಲಿಸುವ ಯೋಜನೆ ಜಾರಿಗೆ ತರಲಾಗಿತ್ತು. ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಇದೇ ಮಾದರಿಯನ್ನು ಕೃಷ್ಣದೇವರಾಯ ವೃತ್ತದಿಂದ ಮಹಾನಗರ ಪಾಲಿಕೆವರೆಗಿನ ರಸ್ತೆ ಸೇರಿದಂತೆ ಹಲವೆಡೆ ಜಾರಿಗೆ ತರಲಾಗಿತ್ತು. ಆದರೆ, ಕಳೆದೊಂದು ಈ ನಿಯಮ ಎಲ್ಲೂ ಪಾಲನೆಯಾಗುತ್ತಿಲ್ಲ.
ಈ ಮೊದಲು ಸಮ-ಬೆಸ್ ಆಧಾರದ ಮೇಲೆ ಬೈಕ್‌ಗಳನ್ನು ನಿಲ್ಲಿಸದಿದ್ದರೆ ಸಂಚಾರ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದರು. ಈಗ ಪೊಲೀಸರೂ ಈ ಕಾರ್ಯ ಮರೆತುಬಿಟ್ಟಿದ್ದಾರೆ. ಕೇವಲ ಹೆಲ್ಮೆಟ್ ರಹಿತರಿಗೆ ದಂಡ ಹಾಕುವುದರಲ್ಲೇ ತಲ್ಲೀಣರಾದಂತಿದೆ.
ಹೆಚ್ಚಾಗುತ್ತಿರುವ ಸಂಚಾರ ಸಿಕ್ಕು
ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ ರಸ್ತೆ, ಹೇಮು ಕಲಾನಿ ವೃತ್ತದಿಂದ ಪೋಸ್ಟಮನ್ ಸರ್ಕಲ್, ಖಡೇಬಜಾರ, ಸಮಾದೇವಿ ಗಲ್ಲಿಗಳು ಸದಾಕಾಲ ಗಿಜಿಗಿಡುತ್ತಿರುತ್ತವೆ. ಇಲ್ಲಿರುವ ಯಾವುದೇ ವಾಣಿಜ್ಯ ಸಂಕೀರ್ಣವೂ ಪಾರ್ಕಿಂಗ್‌ಗೆ ಜಾಗ ಬಿಟ್ಟಿಲ್ಲ. ಹೀಗಾಗಿ, ಎರಡೂ ಕಡೆ ವಾಹನಗಳು ನಿಲ್ಲುವುದರಿಂದ ಪದೇಪದೆ ಸಂಚಾರ ಸಿಕ್ಕು ಉಂಟಾಗುತ್ತಿದೆ. ಮಾರುತಿ ಗಲ್ಲಿ ಮತ್ತು ಗಣಪತಿ ಗಲ್ಲಿಯಲ್ಲಿ ವಿವಿಧ ಸಾಮಗ್ರಿ ಇಳಿಸುವ ಮತ್ತು ತುಂಬಿಸಿಕೊಳ್ಳುವ ಗೂಡ್ಸ್ ವಾಹನಗಳು, ಪ್ರಯಾಣಿಕರಿಗಾಗಿ ಕಾಯುವ ಆಟೋಗಳಿಂದ ಸಂಚಾರ ವ್ಯವಸ್ಥೆ ಹದಗೆಡುತ್ತಿದೆ.