ಬೆಳಗಾವಿಯ ಕೆಎಲ್‌ಇ ಶತಮಾನೊತ್ಸವ ಚಾರಿಟಬಲ್ ಆಸ್ಪತ್ರೆಯ ಮಾನಸಿಕ ರೋಗ ಚಿಕಿತ್ಸಾ ವಿಭಾಗದಿಂದ ಗುರುವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಡಾ.ಅಶ್ವಿನಿ ಪದ್ಮಶಾಲಿ, ನವೀನ ಎನ್., ಡಾ.ಸಂಜಯ ಕಂಬಾರ, ಡಾ.ಆಂಟೋನಿಯೂ ಕರವಾಲೊ ಇತರರು ಪಾಲ್ಗೊಂಡಿದ್ದರು. 
ಬೆಳಗಾವಿ

ಮಕ್ಕಳ ಹವ್ಯಾಸಗಳ ಮೇಲೆ ಪೋಷಕರು ನಿಗಾ ಇಡಬೇಕು

ಬೆಳಗಾವಿ: ಮಗುತನದ ಸಾಂಗತ್ಯದ ಪರಿಣಾಮ ಮುಪ್ಪಾಗುವವರೆಗೆ ಇರುತ್ತದೆ. ಮಕ್ಕಳು ತಮ್ಮ ಶಾಲಾ ಜೀವನದಲ್ಲಿ ಹೊಂದುವ ಗೆಳೆತನದ ಪ್ರಭಾವ ಬೀರುತ್ತದೆ. ಹಾಗಾಗಿ ಮಕ್ಕಳು ಎಂತಹ ಹವ್ಯಾಸವುಳ್ಳವರ ಜತೆಗಿದ್ದಾರೆ ಎನ್ನುವುದನ್ನು ಪೋಷಕರು ಗಮನಿಸುತ್ತಿರಬೇಕು ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ಮಾನಸಿಕ ರೋಗ ಚಿಕಿತ್ಸಾ ವಿಭಾಗದ ಮಕ್ಕಳ ಮನಶಾಸ್ತ್ರಜ್ಞೆ ಡಾ.ಅಶ್ವಿನಿ ಪದ್ಮಶಾಲಿ ಹೇಳಿದರು.
ನಗರದ ಕೆಎಲ್‌ಇ ಶತಮಾನೊತ್ಸವ ಚಾರಿಟಬಲ್ ಆಸ್ಪತ್ರೆಯ ಮಾನಸಿಕ ರೋಗ ಚಿಕಿತ್ಸಾ ವಿಭಾಗದಿಂದ ಗುರುವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಹವ್ಯಾಸಗಳು ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದು ಮುಖ್ಯವಾಗುತ್ತದೆ. ಸಮಾಜದ ಮುಖ್ಯ ಶತ್ರು ಮದ್ಯಪಾನವಾಗಿದೆ. ಪ್ರತಿ ಮನೆಯಲ್ಲೂ ಒಬ್ಬರಾದರೂ ಇದರ ವ್ಯಸನಿಯಾಗಿದ್ದಾರೆ. ಇದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದರು.
ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನವೀನ ಎನ್. ಮಾತನಾಡಿ, ಮದ್ಯವ್ಯಸನದ ಪರಿಣಾಮದಿಂದ ಅನೇಕ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಅದರಲ್ಲೂ ಮಕ್ಕಳ ಮೇಲಾಗುತ್ತಿರುವ ಮಾನಸಿಕ ಹಾಗೂ ಸಾಮಾಜಿಕ ಪರಿಣಾಮಗಳು ಗಂಭಿರವಾಗಿವಾಗಿವೆ. ಈ ಸಮಸ್ಯೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮದ್ಯ ವ್ಯಸನಿಗಳ ಮಕ್ಕಳ ಸಪ್ತಾಹ ಕಾರ್ಯಕ್ರವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ಮಾತನಾಡಿ, ಮದ್ಯಪಾನಿಗಳ ಕುಟುಂಬಗಳಲ್ಲಿ ಬೆಳೆಯುತ್ತಿರುವ ಮಕ್ಕಳ ಹಕ್ಕುಗಳು, ಅವರ ಭದ್ರತೆ ಮತ್ತು ಶಿಕ್ಷಣದ ಮೇಲೆ ಮದ್ಯಪಾನ ಗಂಭೀರ ಪರಿಣಾಮ ಬೀರುತ್ತದೆ. ಮದ್ಯಪಾನದ ದುಷ್ಟರಿಣಾಮಗಳು ಮಕ್ಕಳ ಆತ್ಮ ವಿಶ್ವಾಸ ವರ್ತನೆ ಮತ್ತು ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಸಮಾಜದ ಎಲ್ಲಾ ವರ್ಗದವರು ಮಕ್ಕಳ ಮಾನಸಿಕ ಬೆಂಬಲ ಮತ್ತು ಸುರಕ್ಷಿತ ವಾತಾವರಣ ಒದಗಿಸಲು ಕೈಜೋಡಿಸಬೇಕೆಂದರು.
ಮಾನಸಿಕ ರೋಗ ವಿಭಾಗದ ಮುಖ್ಯಸ್ಥ ಡಾ.ಆಂಟೋನಿಯೂ ಕರವಾಲೊ ಮಾತನಾಡಿ, ಮದ್ಯ ವ್ಯಸನವು ಮಕ್ಕಳ ವಿದ್ಯಾಬ್ಯಾಸ ಆರೋಗ್ಯ ಹಾಗೂ ವ್ಯಕ್ತಿತ್ವದ ವಿಕಾಸದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತಿದೆ. ಪೋಷಕರು ಹಾಗೂ ಸಾರ್ವಜನಿಕರು ಈ ಸಮಸ್ಯೆಗಳನ್ನು ಗಂಭಿರವಾಗಿ ಪರಿಗಣಿಸಿ ಮಕ್ಕಳಿಗೆ ಪ್ರೀತಿ ಸಹಾನುಭೂತಿ ಮತ್ತು ಬೆಂಬಲ ನೀಡುವುದು ಅತ್ಯಗತ್ಯ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಾನಸಿಕ ವಿಭಾಗದ ತಜ್ಞವೈದ್ಯರು, ಆಸ್ಪತ್ರೆಯ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳು, ಜಿ.ಎನ್.ಎಂ ನರ್ಸಿಂಗ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಭಾವತಿ ಪಾಟೀಲ ನಿರೂಪಿಸಿ, ವಂದಿಸಿದರು.