ಸುಟ್ಟಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀರಾಮ-ಹನುಮೋತ್ಸವ ಕಾರ್ಯಕ್ರಮದಲ್ಲಿ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಗಿರೀಶಾನಂದ ಸ್ವಾಮೀಜಿ, ಮಾರುತಿ ಯತ್ನಾಳ, ಮಹೇಶ ಕುಮಠಳ್ಳಿ ಇತರರು ಇದ್ದರು. 
ಬೆಳಗಾವಿ

ಸಾವಯವ ಕೃಷಿಗೆ ಆದ್ಯತೆ ಸಿಗಲಿ

ಅಥಣಿ ಗ್ರಾಮೀಣ: ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಆರೋಗ್ಯ ಸರಿ ಇದ್ದರೆ ಸಶಕ್ತ ಸಮಾಜ ನಿರ್ಮಿಸಲು ಸಾಧ್ಯ ಎಂದು ಕನ್ಹೇರಿ ಕಾಡಸಿದ್ಧೇಶ್ವರ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಜೈ ಹನುಮಾನ ಯುವಕ ಮಂಡಳ ಹಾಗೂ ಡಾ.ಯತ್ನಾಳ ಬ್ರದರ್ಸ್‌ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀರಾಮ-ಹನುಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದ್ರೀಯಗಳು ಸರಿಯಾಗಿ ಕೆಲಸ ನಿರ್ವಹಿಸಲು ಸಾತ್ವಿಕ ಆಹಾರ ಸೇವಿಸಬೇಕು. ದೇವರು ನಮಗಾಗಿ ಗಿಡ-ಮರಗಳನ್ನು ಕೊಟ್ಟಿದ್ದಾನೆ. ಹಣ್ಣು ತಿನ್ನುವುದು ಬಿಟ್ಟು ಪ್ರಾಣಿಗಳನ್ನು ಕೊಂದು ತಿನ್ನುವುದು ಯಾವ ನ್ಯಾಯ ಎಂದರು.
ಭೂಮಿಗೆ ಅತಿಯಾದ ರಸಗೊಬ್ಬರ, ಔಷಧ ಹಾಕಿ ಫಲವತ್ತತೆ ಕಡಿಮೆ ಮಾಡಿದ್ದೇವೆ. ಎಲ್ಲರೂ ಮನೆಯಲ್ಲಿ ದೇಸಿ ಆಕಳು ಸಾಕಬೇಕು. ಹಾಲು, ಮೊಸರು, ಬೆಣ್ಣೆ, ತುಪ್ಪ ತಿನ್ನಬೇಕು. ಇದರಿಂದ ರೋಗ ಬರುವುದಿಲ್ಲ. ಗೋಮೂತ್ರ, ಸಗಣೆ ಎಲ್ಲವೂ ಉಪಯೋಗಕ್ಕೆ ಬರುತ್ತದೆ. ಆರೋಗ್ಯಯುತ ಜೀವನ ನಡೆಸಲು ಸಾವಯವ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಸೂರ್ಪಾಲಿಯ ಗಿರೀಶಾನಂದ ಸ್ವಾಮೀಜಿ ಮಾತನಾಡಿ, ಋಷಿ-ಮುನಿಗಳು ತಿಳಿಸಿದ ಪರಂಪರೆ ಮಾನವ ಕುಲದ ಒಳಿತಿಗಾಗಿ ಹಾಕಿದ ಮಾರ್ಗದರ್ಶಿಯಾಗಿದೆ. ಒಳ್ಳೆಯ ಆಚಾರ, ವಿಚಾರ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದರು.
ಮಾರುತಿ ಯತ್ನಾಳ, ಮಾಜಿ ಶಾಸಕ ಮಹೇಶ ಕುಮಠಳ್ಳಿ, ಶರಣಾನಂದ ಸ್ವಾಮೀಜಿ, ಡಾ.ಮುತ್ತಪ್ಪ ಯತ್ನಾಳ, ಕೆಪಿಸಿಸಿ ಸದಸ್ಯ ಶಾಮರಾವ ಪೂಜಾರಿ, ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣರ, ಡಾ.ಶ್ರವಣಕುಮಾರ ಯತ್ನಾಳ, ಜಿನಗೌಡ ಪಾಟೀಲ, ಮುತ್ತಪ್ಪ ಕಾಡದೇವರಮಠ, ಮುತ್ತಪ್ಪ ಅಂಬಾಜಿ, ಸಿದ್ದಪ್ಪ ಸವದಿ, ಲಕ್ಷ್ಮಣ ಕರಜಗಿ, ಜಗದೀಶ ಅವಟಿ ಇತರರಿದ್ದರು. ಸಂಭಾಜಿ ಗುರ್ಲಾಪುರ ಸ್ವಾಗತಿಸಿದರು. ಅಶೋಕ ಅಂಬಾಜಿ ನಿರೂಪಿಸಿದರು. ನಾಮದೇವ ಆಸಂಗಿ ವಂದಿಸಿದರು.