ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ಮಳೆಗಾಲ ಅಧಿವೇಶನ ಆಯೋಜಿಸುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳ ಅಶೋಕ ಚಂದರಗಿ, ಮಹಾದೇವ ತಳವಾರ, ಬಲರಾಮ ಮಾಸೇನಟ್ಟಿ, ವಾಜೀದ್ ಹಿರೇಕೋಡಿ ಇತರರು ಸಭೆ ನಡೆಸಿದರು. 
ಬೆಳಗಾವಿ

ಮಳೆಗಾಲ ಅಧಿವೇಶನಕ್ಕೆ ವಿರೋಧ

ಶಂಕರ ಗೆಜ್ಜಿ
ಬೆಳಗಾವಿ: ಜುಲೈ ಎರಡನೇ ವಾರದಲ್ಲಿ ಸುವರ್ಣ ವಿಧಾನಸೌಧದಲ್ಲಿ ಮಳೆಗಾಲದ ಅಧಿವೇಶನ ನಡೆಸಲು ಮುಂದಾಗಿರುವ ಸರ್ಕಾರ ನಿರ್ಧಾರಕ್ಕೆ ಸ್ಥಳೀಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಅಧಿವೇಶನ ನಡೆಸುವುದು ಬೇಡ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಈ ಸಂಬಂಧ ನಗರದಲ್ಲಿ ಭಾನುವಾರ ಸಭೆ ನಡೆಸಿದ 17 ವಿವಿಧ ಸಂಘಟನೆಗಳ ಪ್ರಮುಖರು, ಮಳೆಗಾಲದ ಅಧಿವೇಶನ ನಡೆಸುವ ನಿರ್ಧಾರವನ್ನು ಒಕ್ಕೊರಲಿನಿಂದ ವಿರೋಧಿಸಿದರು.
ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಮಳೆ ಜೋರಾಗಿರುತ್ತದೆ. ನದಿಗಳು ತುಂಬಿ ಪ್ರವಾಹ ಎದುರಾಗುತ್ತದೆ. ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಅಧೀನ ಅಧಿಕಾರಿಗಳು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಅಧಿವೇಶನ ನಡೆಸಿದಲ್ಲಿ ಅದರ ತಯಾರಿಯಲ್ಲೇ ಕಳೆದು ಹೋಗುತ್ತಾರೆ. ಜನರ ಸಮಸ್ಯೆಗಳತ್ತ ಗಮನಿಸಲು ಆಗುವುದಿಲ್ಲ. ಹೀಗಾಗಿ ಸರ್ಕಾರ ತನ್ನ ನಿರ್ಧಾರ ಬದಲಿಸಿ, ಚಳಿಗಾಲದ ಅಧಿವೇಶನವನ್ನೇ ಒಂದು ತಿಂಗಳ ಅವಧಿವರೆಗೂ ಆಯೋಜಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಮಹಾದೇವ ತಳವಾರ, ಬಲರಾಮ ಮಾಸೇನಟ್ಟಿ, ವಾಜೀದ್ ಹಿರೇಕೊಡಿ, ಶ್ರೀನಿವಾಸ ತಾಳೂಕರ, ಮಲ್ಲಪ್ಪ ಗುಡಗೇನಟ್ಟಿ, ಈಶ್ವರಗೌಡ ಪಾಟೀಲ, ಬಾಳಪ್ಪ ಗುಡಗೇನಟ್ಟಿ ಇತರರಿದ್ದರು.