ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ಬೆಳಗಾವಿಯಲ್ಲಿ ಬುಧವಾರ ಮೆಡಿಕಲ್ ಶಾಪ್‌ನವರು ಪ್ರತಿಭಟಿಸಿದರು.  
ಬೆಳಗಾವಿ

ಅನ್‌ಲೈನ್ ಔಷಧ ಮಾರಾಟಕ್ಕೆ ವಿರೋಧ

ಬೆಳಗಾವಿ : ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ದೇಶಾದ್ಯಂತ ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ ನಗರದಲ್ಲಿ ಬುಧವಾರ ಔಷಧ ಮಳಿಗೆಗಳ ಮಾಲೀಕರು ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ (ಎಐಒಸಿಡಿ) ಕರೆ ಬೆಂಬಲಿಸಿ ಜಿಲ್ಲಾ ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ, ರೀಟೈಲ್ ಫಾರ್ಮಸಿ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕೈಗೆ ಕಪ್ಪು ಬಟ್ಟೆ ಧರಿಸಿ ಕನ್ನಡ ಸಾಹಿತ್ಯ ಭವನದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ತಮ್ಮ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಆನ್‌ಲೈನ್‌ದಲ್ಲಿ ಯಾವುದೇ ನಿಯಂತ್ರಣ ಇಲ್ಲದೇ ಔಷಧಗಳ ಮಾರಾಟ ಮಾಡಲಾಗುತ್ತಿದೆ. ಆಂಟಿಬಯೋಟಿಕ್,
ವ್ಯಸನಕಾರಿ ಔಷಧಗಳು ದುರುಪಯೋಗವಾಗುತ್ತಿವೆ. ನಕಲಿ ಔಷಧ ಚೀಟಿಗಳ ಬಳಕೆ ಹೆಚ್ಚಳವಾಗುತ್ತಿದ್ದು, ಇದು ಯುವಕರು ಡ್ರಗ್ಸ್ ವ್ಯಸನಿಗಳಾಗಲು ದಾರಿ ಮಾಡಿಕೊಡುತ್ತಿದೆ. ಜತೆಗೆ ಜೀವರಕ್ಷಕ ಔಷಧಗಳ ಮೇಲೂ ಅತೀ ರಿಯಾಯಿತಿ ಕೊಡಲಾಗುತ್ತಿದ್ದು, ಇದರಿಂದ ಸಣ್ಣಪುಟ್ಟ ಔಷಧ ಅಂಗಡಿಗಳನ್ನು ಮುಂಚುವ ಪರಿಸ್ಥಿತಿ ಬಂದಿದೆ. ಹೀಗಾಗಿ, ಆನ್‌ಲೈನ್ ಔಷಧ ಮಾರಾಟ ವ್ಯವಸ್ಥೆಯನ್ನು ಸರ್ಕಾರ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಗಡಿಯಣ್ಣವರ, ಪ್ರಧಾನ ಕಾರ್ಯದರ್ಶಿ ಎನ್.ಜಿ.ಕುಲಕರ್ಣಿ, ಖಜಾಂಚಿ ಬಿ.ಎಸ್.ಕುಡಚಿಮಠ, ಸಲೀಂ ಬರ್ಗಿರ್, ಕೇಶವ ಕುಲಕರ್ಣಿ, ಪ್ರಕಾಶ ಚೌಧರಿ, ವೀರೇಶ ಕಿತ್ತೂರ, ಎಫ್.ಎಂ.ಪಾಟೀಲ, ಮಹಾವೀರ ನಂದಗಾವಿ ಇರರಿದ್ದರು.