ನರೇಗಾ ತಿದ್ದುಪಡಿ ಮಸೂದೆ ವಿರೋಧಿಸಿ ಬೆಳಗಾವಿಯಲ್ಲಿ ಸೋಮವಾರ ಭಾರತೀಯ ಕೃಷಿಕ ಸಮಾಜದ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಸಿದಗೌಡ ಮೋದಗಿ, ಶಿವಾಜಿ ಕಾಗಣೇಕರ, ಕವಿತಾ ಜಾರಕಿಹೊಳಿ, ಲಕ್ಷ್ಮಣ ದುರ್ಗಿ ಇತರರಿದ್ದರು.
ಬೆಳಗಾವಿ: ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ವಿಬಿ ಜಿ ರಾಮ್ ಜಿ ಮಸೂದೆಯಾಗಿ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ನಗರದಲ್ಲಿ ಸೋಮವಾರ ಭಾರತೀಯ ಕೃಷಿಕ ಸಮಾಜ(ಸಂಯುಕ್ತ) ರೈತ ಸಂಘಟನೆ ಜಿಲ್ಲಾ ಘಟಕದಿಂದ ಪ್ರತಿಭಟಿಸಲಾಯಿತು.
ನಗರದ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿವರಗೆ ರ‌್ಯಾಲಿಯಲ್ಲಿ ತೆರಳಿ, ಈ ಸಂಬಂಧಿತ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಈ ಯೋಜನೆಯ ತಿದ್ದುಪಡಿ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣ ಭಾರತದ ಕನಸಿನ ಯೋಜನೆಯನ್ನು ಸಂಕೀರ್ಣಗೊಳಿಸುವ ಹುನ್ನಾರ ನಡೆಸಿದೆ. ಗ್ರಾಮೀಣ ಬಡ, ಮಧ್ಯಮ ಹಾಗೂ ಕೃಷಿ ಕಾರ್ಮಿಕರಿಗೆ ನರೇಗಾ ಯೋಜನೆ ವರದಾನವಾಗಿದೆ. ಈಗ ಮಹಾತ್ಮಾ ಗಾಂಧೀಜಿ ಹೆಸರು ಬದಲಾಯಿಸುವ ನೆಪದಲ್ಲಿ ಈ ಯೋಜನೆಗೆ ತಿದ್ದುಪಡಿ ಮಾಡಿ, ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿರುವುದು ಖಂಡನೀಯ. ಈ ಕೂಡಲೇ ತಿದ್ದುಪಡಿ ವಾಪಸ್ಸು ಪಡೆದು, ಮೊದಲಿನಂತೆಯೇ ಯೋಜನೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಅಧ್ಯಕ್ಷ ಸಿದಗೌಡ ಮೋದಗಿ, ಪರಿಸರವಾದ ಶಿವಾಜಿ ಕಾಗಣೇಕರ, ಮಜದೂರ ನವ ನಿರ್ಮಾಣ ಸಂಘಟನೆಯ ಕವಿತಾ ಜಾರಕಿಹೊಳಿ, ಸಂಜೀವ ಡೊಂಗರಗಾವಿ, ಬಸಪ್ಪ ಅಂಗಡಿ, ಲಕ್ಷ್ಮಣ ದುರ್ಗಿ, ಗೌಡಪ್ಪ ನಂದಿ ಇತರರಿದ್ದರು.