ಕರ್ನಾಟಕ ವಿದ್ಯುತ್ ಮಂಡಳಿ ಖಾಸಗೀಕರಣಗೊಳಿಸುವ ಸರ್ಕಾರದ ಪ್ರಯತ್ನ ಕೈಬಿಡುವಂತೆ ಕಿತ್ತೂರು ಕರ್ನಾಟಕ ಸೇನೆಯಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ದೀಪಕ ಶಟೋಜಿ, ರಾಜು ಬೋಳಣ್ಣವರ, ಶಿವಾನಂದ ಕುರಬೇಟ, ಮಲ್ಲಿಕಾರ್ಜುನ ಬಾಜಿ ಇತರರಿದ್ದರು.
ಸಂಘಟಣೆಯ ಬೈಲಹೊಂಗಲ ತಾಲೂಕು ಘಟಕ ಅಧ್ಯಕ್ಷ ರಾಜು ಬೋಳಣ್ಣವರ, ಯುವ ಘಟಕ ಅಧ್ಯಕ್ಷ ದೀಪಕ ಶಟೋಜಿ ಮಾತನಾಡಿ, ವಿದ್ಯುತ್ ಎನ್ನುವುದು ಅತ್ಯಗತ್ಯ ಸೇವೆಯಾಗಿದ್ದು ಸಾರ್ವಜನಿಕ ಆಸ್ತಿಯಾಗಿದೆ. ಇದನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಿದರೆ, ಸಾಮಾನ್ಯ ಜನರು, ರೈತರು, ಬಡವರು, ಸಣ್ಣ ಕೈಗಾರಿಕೆಗಳಿಗೆ ಹೊರೆಯಾಗುತ್ತದೆ. ಲಕ್ಷಾಂತರ ನೌಕರರು ಖಾಸಗೀಕರಣ ದಿಂದ ಉದ್ಯೋಗ ಭದ್ರತೆ, ವೇತನ, ಪಿಂಚಣಿ ಸೌಲಭ್ಯಗಳಿಗೆ ಧಕ್ಕೆಯಾಗಲಿದ್ದು, ರೈತರಿಗೆ ನೀಡುತ್ತಿರುವ ಉಚಿತ, ಸಬ್ಸಿಡಿ ವಿದ್ಯುತ್ ಯೋಜನೆ ಸ್ಥಗಿತಗೊಳ್ಳುವ ಭೀತಿ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಜನತೆಯ ಹಿತದಷ್ಟಿಯಿಂದ ಖಾಸಗೀಕರಣದ ಪ್ರಯತ್ನ ಕೂಡಲೇ ಕೈಬಿಡಬೇಕು. ಒಂದು ವೇಳೆ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.