ಬೆಳಗಾವಿ: ನಗರ ವ್ಯಾಪ್ತಿಯಲ್ಲಿ ಅಕ್ರಮ ಹಣ ವರ್ಗಾವಣೆ ಹಾಗೂ ಸೈಬರ್ ಅಪರಾಧಿಗಳಿಗಾಗಿ ಬಳಸುತ್ತಿರುವ ಒಟ್ಟು 2,992 ಮ್ಯೂಲ್ ಅಕೌಂಟ್‌ಗಳು ಸಕ್ರಿಯವಾಗಿರುವುದು ಪತ್ತೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ತಿಳಿಸಿದರು.
ನಗರದ ಸೋಮವಾರ ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಸೈಬರ್ ಅಪರಾಧಿಗಳು ಬೇರೊಬ್ಬರ ಖಾತೆಗಳನ್ನು ಬಳಸಿ ಅಕ್ರಮದ ಹಣ ಜಮೆ ಮಾಡಿಸಿಕೊಂಡು ಬೇರೆ ಖಾತೆಗಳಿಗೆ ರವಾನಿಸಿಕೊಳ್ಳುತ್ತಾರೆ. ಇವುಗಳನ್ನೇ ಮ್ಯೂಲ್ ಅಕೌಂಟ್ ಎಂದು ಕರೆಯಲಾಗುತ್ತದೆ. ಇಂತಹ ಅಕೌಂಟ್‌ಗಳನ್ನು ತೆರೆಯಲು ಆಮಿಷ ಒಡ್ಡುತ್ತಿದ್ದಾರೆ. ಇದಕ್ಕೆ ಯಾರೂ ಮಾರು ಹೋಗಬಾರದು ಎಂದರು.
ಮ್ಯೂಲ್ ಅಕೌಂಟ್‌ಗೆ ಅಕ್ರಮದ ಹಣ ಬಂದ ತಕ್ಷಣ ಬೇರೆ ಖಾತೆಗೆ ವರ್ಗಾಯಿಸುತ್ತಾರೆ. ಅದಕ್ಕೆ ಲೇಯರ್ ಒನ್ ಖಾತೆ ಎಂದು ಕರೆಯುತ್ತಾರೆ. ಅದರ ಮೂಲಕ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾಯಿಸಿಕೊಳ್ಳುತ್ತಾರೆ. ಆದರೆ ಒಂದು ಸಲ ಈ ಬಗ್ಗೆ ಕೇಸ್ ಆದಾಗ, ಮುಖ್ಯವಾಗಿ ಮ್ಯೂಲ್ ಅಕೌಂಟ್ ಇದ್ದವರೇ ಸಿಕ್ಕಿ ಬೀಳುತ್ತಾರೆ.
ಈಗಾಗಲೇ ಬೆಳಗಾವಿ ನಗರದಲ್ಲಿ 772 ಲೇಯರ್ ಖಾತೆಗಳೂ ಪತ್ತೆಯಾಗಿವೆ. ಈ ಸಂಬಂಧ 4 ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದು ಮಾಹಿತಿ ನೀಡಿದರು.