- ಹೆಚ್ಚಿದ ಅಪರಾಧ ಪ್ರಕರಣ
- ಹೆಚ್ಚುವರಿ ಪೊಲೀಸ್ ಸ್ಟೇಷನ್ ಮಂಜೂರಿಗೆ ಆಗ್ರಹ
ಸವದತ್ತಿ: ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಶ್ರದ್ಧಾ ಕೇಂದ್ರ ಯಲ್ಲಮ್ಮನಗುಡ್ಡ, ಮುನವಳ್ಳಿ ಹಾಗೂ 65 ಗ್ರಾಮಗಳ ಕಾನೂನು ಸುವ್ಯವಸ್ಥೆ ಹೊಣೆಯನ್ನು ಒಂದೇ ಪೊಲೀಸ್ ಠಾಣೆ ನಿರ್ವಹಿಸುತ್ತಿರುವುದು ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 65 ಗ್ರಾಮ, 497 ಚ.ಕಿ.ಮೀ. ವಿಸ್ತೀರ್ಣ ಹಾಗೂ 2011ರ ಜನಗಣತಿ ಪ್ರಕಾರ 3.11 ಲಕ್ಷ ಜನಸಂಖ್ಯೆ ಇದೆ. ಠಾಣೆಯಲ್ಲಿ ಒಬ್ಬ ಪೊಲೀಸ್ ನಿರೀಕ್ಷಕ (ಪಿಐ), 4 ಪೊಲೀಸ್ ಉಪ ನಿರೀಕ್ಷಕರು (ಪಿಎಸ್‌ಐ), 7 ಸಹಾಯಕ ಉಪ ನಿರೀಕ್ಷಕರು (ಎಎಸ್‌ಐ), 20 ಹವಾಲ್ದಾರರು ಹಾಗೂ 36 ಕಾನ್‌ಸ್ಟೆಬಲ್ ಹುದ್ದೆ ಮಂಜೂರಾಗಿವೆ. ಸಧ್ಯ 2 ಪಿಎಸ್‌ಐ ಹಾಗೂ 2 ಕಾನ್‌ಸ್ಟೆಬಲ್ ಹುದ್ದೆ ಖಾಲಿ ಇದ್ದು, ಇರುವ ಸಿಬ್ಬಂದಿ ಹೆಚ್ಚುವರಿ ಹೊಣೆ ಹೊರಬೇಕಿದೆ.
ಯಲ್ಲಮ್ಮಗುಡ್ಡ ಉತ್ತರ ಕರ್ನಾಟಕದ ಪ್ರಮುಖ ಶಕ್ತಿಪೀಠವಾಗಿದ್ದು, ದಿನನಿತ್ಯ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಪ್ರಮುಖ ನಾಲ್ಕು ಹುಣ್ಣಿಮೆ ಜಾತ್ರೆಗಳಲ್ಲಿ 1,200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಬೇಕಾಗುತ್ತದೆ. ಅಪರಾಧ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ವಿವಿಧ ಗಣ್ಯರ ಭೇಟಿ ಸಂದರ್ಭದಲ್ಲಿಯೂ ಇದೇ ಠಾಣೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ.
ವೇಗವಾಗಿ ಬೆಳೆಯುತ್ತಿರುವ ಸವದತ್ತಿಯಿಂದ 16 ಕಿ.ಮೀ. ದೂರದಲ್ಲಿರುವ ಮುನವಳ್ಳಿಯಲ್ಲಿ ಪ್ರಸ್ತುತ ಪೊಲೀಸ್ ಔಟ್‌ಪೋಸ್ಟ್ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಅದರ ವ್ಯಾಪ್ತಿಯಲ್ಲಿ 22 ಗ್ರಾಮಗಳಿವೆ. ಯಲ್ಲಮ್ಮನಗುಡ್ಡ ವ್ಯಾಪ್ತಿಯಲ್ಲಿ 12 ಗ್ರಾಮಗಳು ಸೇರಿವೆ. ಈ ಎರಡೂ ಪ್ರದೇಶಗಳಲ್ಲಿ ಪ್ರತ್ಯೇಕ ಪೊಲೀಸ್ ಠಾಣೆ ಸ್ಥಾಪಿಸಿದರೆ ಸುಮಾರು 34 ಗ್ರಾಮಗಳ ಪೊಲೀಸ್ ಸೇವೆ ಸುಗಮವಾಗಲಿದೆ. ಜತೆಗೆ ಸವದತ್ತಿ ಠಾಣೆ ಮೇಲಿನ ಕಾರ್ಯಭಾರ ಕೂಡ ಕಡಿಮೆಯಾಗಲಿದೆ ಎಂಬುದು ನಾಗರಿಕರ ಅಭಿಪ್ರಾಯ.
ಕ್ರೈಂ ಕೇಸ್ ಏರಿಕೆ
2022ರಲ್ಲಿ 351, 2023ರಲ್ಲಿ 448, 2024ರಲ್ಲಿ 423, 2025ರಲ್ಲಿ 457 ಹಾಗೂ 2026 (ಜೂನ್ 20ರವರೆಗೆ) 372 ಎ್ಐಆರ್ ದಾಖಲಾಗಿವೆ. ಇದೇ ಪ್ರಮಾಣ ಮುಂದುವರಿದರೆ 2026ರ ಅಂತ್ಯದ ವೇಳೆಗೆ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.
"
ಮುನವಳ್ಳಿ ಭಾಗದ ಜನಸಂಖ್ಯೆ ಹಾಗೂ ಸವದತ್ತಿ ಪೊಲೀಸ್ ಠಾಣೆಯ ಹೆಚ್ಚುತ್ತಿರುವ ಕಾರ್ಯಭಾರ ಪರಿಗಣಿಸಿ ಮುನವಳ್ಳಿ ಪೊಲೀಸ್ ಔಟ್‌ಪೋಸ್ಟ್ ಅನ್ನು ಪೂರ್ಣ ಪ್ರಮಾಣದ ಠಾಣೆಯಾಗಿ ಮೇಲ್ದರ್ಜೆಗೇರಿಸುವುದು.ಯಲ್ಲಮ್ಮಗುಡ್ಡದಲ್ಲಿ ಹೊಸ ಪೊಲೀಸ್ ಠಾಣೆ ಸ್ಥಾಪಿಸುವ ಕುರಿತು ಸರ್ಕಾರದ ಗಮನಸೆಳೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
— ವಿಶ್ವಾಸ ವೈದ್ಯ ಶಾಸಕ
"
ಮುನವಳ್ಳಿಯಲ್ಲಿ 22 ಗ್ರಾಮಗಳಿಗೆ ಪೊಲೀಸ್ ಔಟ್‌ಪೋಸ್ಟ್ ಮಾತ್ರ ಇದೆ. ಸುಮಾರು 30-35 ಕಿಮೀ ದೂರದ ಸವದತ್ತಿ ಠಾಣೆಗೆ ಹೋಗಬೇಕಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮುನವಳ್ಳಿ ಪೊಲೀಸ್ ಔಟ್‌ಪೋಸ್ಟ್ ಅನ್ನು ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯಾಗಿ ಮೇಲ್ದರ್ಜೆಗೇರಿಸಬೇಕು.
— ಉಮೇಶ ಬಾಳಿ ನಾಗರಿಕ, ಮುನವಳ್ಳಿ