ಸವದತ್ತಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿದರು. ಸಂಗನಬಸಯ್ಯ ಗದ್ದಗಿಮಠ ಇತರರಿದ್ದರು.
ಸವದತ್ತಿ: ನಗರದಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆ ಸಮರ್ಪಕವಾಗಿ ನಿರ್ವಹಿಸುವ ಮೂಲಕ ಯಾವುದೇ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಸೂಚಿಸಿದರು.
ನಗರದ ಕೃಷಿ ಇಲಾಖೆ ಕಚೇರಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ನಗರದ ಎಲ್ಲ ವಾರ್ಡ್, ಓಣಿ ಹಾಗೂ ಹೊಸ ಬಡಾವಣೆಗಳಿಗೂ ನಿರಂತರವಾಗಿ ನೀರು ಪೂರೈಕೆಯಾಗಬೇಕು. ಸಾರ್ವಜನಿಕರಿಂದ ದೂರು ಬಾರದಂತೆ ಅಧಿಕಾರಿಗಳು ಪರಿಶೀಲನೆ ನಡೆಸಿ ತ್ವರಿತವಾಗಿ ಸಮಸ್ಯೆ ಪರಿಹರಿಸಬೇಕು ಎಂದು ತಿಳಿಸಿದರು.
24ಗಿ7 ಯೋಜನೆ ಪಟ್ಟಣದ ಮಹತ್ವದ ಯೋಜನೆಯಾಗಿದ್ದು, ಅದರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಬಾರದು. ಪೈಪ್‌ಲೈನ್ ಸೋರಿಕೆ, ಕಡಿಮೆ ಒತ್ತಡ ಹಾಗೂ ವಿವಿಧ ತಾಂತ್ರಿಕ ದೋಷ ತಕ್ಷಣ ಸರಿಪಡಿಸಬೇಕು ಎಂದು ಸೂಚಿಸಿದರು.
ಇಂಜಿನಿಯರ್ ಪ್ರವೀಣ ಸಾಯ್ನೆಕರ ಮಾತನಾಡಿ, ಕೆಲ ಟ್ಯಾಂಕ್‌ಗಳಲ್ಲಿ ಏರ್ ಹಿಡಿಯುತ್ತಿರುವುದರಿಂದ ನೀರು ಸರಬರಾಜಿನಲ್ಲಿ ತೊಂದರೆಯಾಗುತ್ತಿದೆ. ಏರ್ ವಾಲ್ವ್ ಅಳವಡಿಸುವ ಮೂಲಕ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೆಲವೆಡೆ ನಲ್ಲಿಗಳನ್ನು ತೆರೆದಿಡುತ್ತಿರುವುದರಿಂದ ನೀರು ಪೋಲಾಗುತ್ತಿದೆ ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ಸಂಗನಬಸಯ್ಯ ಗದ್ದಗಿಮಠ, ಗಿರೀಶ ಮುನವಳ್ಳಿ, ಎಚ್.ಎ.ಕದ್ರಾಪುರ, ಕಾರ್ಯನಿರ್ವಾಹಕ ಅಭಿಯಂತ ಅಶ್ವಿನಿ ಕಲ್ಕುಟ್ಕರ್ ಇತರರಿದ್ದರು.