ಬೆಳಗಾವಿ ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ತೆರಿಗೆ ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಅಧ್ಯಕ್ಷೆ ರೇಖಾ ಹೂಗಾರ ಮಾತನಾಡಿದರು. ಪ್ರೀತಿ ಕಾಮಕರ, ಹನುಮಂತ ಕೊಂಗಾಲಿ ಇತರರಿದ್ದರು.
ಬೆಳಗಾವಿ: ಮಹಾನಗರ ಪಾಲಿಕೆಯ ಜಾಹೀರಾತು ವಿಭಾಗದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಲೋಕಾಯುಕ್ತ ತನಿಖೆಗೆ ಠರಾವು ಕೈಗೊಳ್ಳಲಾಗುವುದು ಎಂದು ಉಪಮೇಯರ್ ಹನುಮಂತ ಕೊಂಗಾಲಿ ತಿಳಿಸಿದರು.
ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ತೆರಿಗೆ ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿ, ಕಳೆದೊಂದು ವರ್ಷದಿಂದ ಜಾಹೀರಾತು ವಿಭಾಗದಿಂದ 1.50 ಕೋಟಿ ರೂ. ನಷ್ಟವಾಗಿದ್ದು, ಅಧಿಕಾರಿಗಳು, ಸಿಬ್ಬಂದಿ, ಗುತ್ತಿಗೆದಾರರೇ ಕಾರಣರಾಗಿದ್ದಾರೆ. ಈ ವಿಷಯ ಸಾಮಾನ್ಯ ಸಭೆಗೆ ಶಿಫಾರಸು ಮಾಡಲು ತಿಳಿಸಿದರು.
ತೆರಿಗೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಹೂಗಾರ ಮಾತನಾಡಿ, ಜಾಹೀರಾತು ವಿಭಾಗದಿಂದ ನಿರೀಕ್ಷಿತ ಆದಾಯ ಬರುತ್ತಿಲ್ಲ. ಒಂದು ವರ್ಷದಿಂದ ಟೆಂಡರ್ ಪ್ರಕ್ರಿಯೆ ನಿಲ್ಲಿಸಿದ್ದರಿಂದ ಗುತ್ತಿಗೆದಾರರಿಗೆ ಲಾಭವಾಗುತ್ತಿದೆ. ಪಾಲಿಕೆಗೆ ನಷ್ಟವಾಗುತ್ತದೆ. ಈ ಸಮಸ್ಯೆ ಪರಿಹರಿಸಿ ಪಾಲಿಕೆಗೆ ಆದಾಯ ಬರುವಂತೆ ಕ್ರಮ ವಹಿಸಬೇಕು ಎಂದರು.
ನಗರದಲ್ಲಿ ಆಸ್ತಿ ಸೇರಿ ವಿವಿಧ ತೆರಿಗೆ ಸಂಗ್ರಹ ಪ್ರಕ್ರಿಯೆಗೆ ವೇಗ ನೀಡುವ ಜತೆಗೆ ಬಾಕಿ ತೆರಿಗೆ ವಸೂಲಿಗೆ ಆದ್ಯತೆ ನೀಡಬೇಕು. ತೆರಿಗೆ ಸಂಗ್ರಹ ಮಾಡದಿದ್ದರೆ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತದೆ. ಅಧಿಕಾರಿಗಳು ಪಾರದರ್ಶಕ ಆಡಳಿತ ನಡೆಸಬೇಕು. ಸದಸ್ಯರ ಗಮನಕ್ಕೆ ತಾರದೆ ಯಾವುದೇ ನಿರ್ಣಯ ಕೈಗೊಳ್ಳಬಾರದು. ಎ ಮತ್ತು ಬಿ ಖಾತಾ ಸಮಸ್ಯೆ ಆಗದಂತೆ ಕ್ರಮವಹಿಸಿ ಎಂದು ಸೂಚಿಸಿದರು.
ಮೇಯರ್ ಪ್ರೀತಿ ಕಾಮಕರ, ಸಾರಿಕಾ ಪಾಟೀಲ, ಸಂತೋಷ ಪೇಡನೆಕರ, ಉಪ ಆಯುಕ್ತೆ ಲಕ್ಷ್ಮೀ ಸುಳಗೇಕರ ಇತರರಿದ್ದರು.
ವರ್ಗಾವಣೆಗೆ ಆಕ್ರೋಶ: ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಿಭಾಗಗಳಲ್ಲಿನ ಕಾಯಂ, ಹೊರಗುತ್ತಿಗೆ ಸಿಬ್ಬಂದಿ ವರ್ಗಾವಣೆ ಕುರಿತು ಮೇಯರ್, ಉಪಮೇಯರ್ ಗಮನಕ್ಕೆ ತರಬೇಕು. ಪಾಲಿಕೆ ಆಯುಕ್ತರು ಯಾವುದೇ ಮಾಹಿತಿ ನೀಡದೆ ವರ್ಗಾವಣೆ ಮಾಡಬಾರದು ಎಂದು ಸದಸ್ಯರು ಒತ್ತಾಯಿಸಿದರು.