ನಗರದ ಜೆಎನ್‌ಎಂಸಿ ಆವರಣದಲ್ಲಿ ಮಂಗಳವಾರ ಆರಂಭವಾದ ರಾಷ್ಟ್ರೀಯ ಏಕೀಕರಣ ಶಿಬಿರವನ್ನು ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚನ್‌ನ ಯೋಜನಾಧಿಕಾರಿ ಡಾ.ವಿ.ಡಿ.ಪಾಟೀಲ ಉದ್ಘಾಟಿಸಿದರು. ಗಿರಿಧರ ಉಪಾಧ್ಯಾಯ, ಸಂತೋಷ ಎನ್., ಡಾ.ವಿ.ಎಂ.ಪಟ್ಟಣಶೆಟ್ಟಿ, ಡಾ.ಅಶ್ವಿನಿ ನರಸಣ್ಣವರ, ಡಾ.ಸಂದೀಪ ಸಾಗರೆ ಇತರರಿದ್ದರು. 
ಬೆಳಗಾವಿ

ಏಕತೆ ಬೆಳೆಸಲು ಎನ್‌ಎಸ್‌ಎಸ್ ಸಹಕಾರಿ

ಬೆಳಗಾವಿ: ವಿದ್ಯಾರ್ಥಿಗಳಲ್ಲಿ ಏಕತೆ, ನಾಯಕತ್ವದ ಗುಣ ಮತ್ತು ಸಾಮಾಜಿಕ ಜವಾಬ್ದಾರಿ ಮನೋಭಾವ ಬೆಳೆಸುವ ಗುರಿಯನ್ನು ರಾಷ್ಟ್ರೀಯ ಏಕೀಕರಣ ಶಿಬಿರ ಹೊಂದಿದೆ ಎಂದು ನಗರದ ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್ ಯೋಜನಾಧಿಕಾರಿ ಡಾ.ವಿ.ಡಿ.ಪಾಟೀಲ ಹೇಳಿದರು.
ನಗರದ ಜೆಎನ್‌ಎಂಸಿ ಆವರಣದಲ್ಲಿ ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕೇಂದ್ರ ಸರ್ಕಾರದ ಪ್ರಾದೇಶಿಕ ನಿರ್ದೇಶನಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್ ಸಹಯೋಗದಲ್ಲಿ ‘ರಾಷ್ಟ್ರ ಏಕತೆಗಾಗಿ ಯುವ ಯೋಗಕ್ಷೇಮ’ ಎಂಬ ವಿಷಯದಡಿ ಮಂಗಳವಾರ ಆರಂಭವಾದ ರಾಷ್ಟ್ರೀಯ ಏಕೀಕರಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಎನ್‌ಎಸ್‌ಎಸ್ ಶಿಬಿರಗಳು ಶಿಬಿರಾರ್ಥಿಗಳಲ್ಲಿ ರಾಷ್ಟ್ರೀಯ ಏಕತೆ, ದೇಶಾಭಿಮಾನ, ಶಿಸ್ತು, ಆರೋಗ್ಯದ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ವಿದ್ಯಾರ್ಥಿಗಳು ಇಂತಹ ಶಿಬಿರಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವಿ ರಿಜಿಸ್ಟ್ರಾರ್ ಡಾ.ವಿ.ಎಂ.ಪಟ್ಟಣಶೆಟ್ಟಿ ಮಾತನಾಡಿ, ಸಮುದಾಯ ಸೇವೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಹತ್ವದ ಪಾತ್ರವಹಿಸುತ್ತದೆ. ಇದು ವಿದ್ಯಾರ್ಥಿಗಳ ಮನೋಬಲ ವೃದ್ಧಿಗೆ ಸಹಕಾರಿಯಾಗಿದೆ ಎಂದರು.
ಎನ್‌ಎಸ್‌ಎಸ್ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕ ಗಿರಿಧರ ಉಪಾಧ್ಯಾಯ, ರಾಜ್ಯ ಯುವ ಅಧಿಕಾರಿ ಸಂತೋಷ ಎನ್., ಸಂಯೋಜಕಿ ಡಾ.ಅಶ್ವಿನಿ ನರಸಣ್ಣವರ, ಡಾ.ಸಂದೀಪ ಸಾಗರೆ ಇತರರಿದ್ದರು.