ಬೆಳಗಾವಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ವಲಯ ಕ್ಷೇತ್ರದ ಶಿಕ್ಷಣಾಧಿಕಾರಿ, ಶಾಲಾ ನೋಡಲ್ ಅಧಿಕಾರಿ ವಾಟ್ಸಾಪ್ ಗ್ರೂಪ್ ಮಾಡಿ ಪ್ರತಿದಿನ ಸಂದರ್ಶನದ ವಿವಿಧ ಮೇಲ್ವಿಚಾರಣೆ ಮಾಡಬೇಕು ಎಂದು ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಅಪರ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಸೂಚಿಸಿದರು.
ಇಲ್ಲಿನ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಜಿಲ್ಲೆಯ ಅನುಷ್ಠಾನಧಿಕಾರಿಗಳು, ಸರ್ಕಾರಿ ಅನುದಾನಿತ, ಅನುದಾನರಹಿತ ಶಾಲೆಗಳ ಮುಖ್ಯಸ್ಥರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲ ಶಾಲೆಗಳಿಗೆ ಎಲ್‌ಬಿಎ ಮತ್ತು ಮಾಡೆಲ್ ಪ್ರಶ್ನೆಪತ್ರಿಕೆ ಪ್ರತಿಗಳನ್ನು ಕಡ್ಡಾಯವಾಗಿ ಮಕ್ಕಳಿಗೆ ಮುಟ್ಟಿಸಬೇಕು. ಮಕ್ಕಳಿಗೆ ಸತತವಾಗಿ ಅಭ್ಯಾಸ ಮಾಡಿಸಬೇಕು ಎಂದರು.
ಪಾರದರ್ಶಕ ಪರೀಕ್ಷೆ ನಡೆಯುತ್ತಿದ್ದು, ಮಿಷನ್ 40+ ಬಹಳ ಮುಖ್ಯವಾಗಿದೆ. ಈ ಬಾರಿ ಶೇ.100 ಫಲಿತಾಂಶ ಸಾಧಿಸುವ ನಿಟ್ಟಿನಲ್ಲಿ ಅಧಿಕಾರಿ, ಶಿಕ್ಷಕರು ವಿಶೇಷ ಪ್ರಯತ್ನ ಹಾಕಬೇಕು. ಶೇ.40ರಷ್ಟು ಅಂಕಗಳಿಸುವ ಮಕ್ಕಳ ಸುಧಾರಣೆಗೆ ಮೊದಲ ಆದ್ಯತೆ ನೀಡಬೇಕು. ನೆರೆಯ ರಾಜ್ಯಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.95ಕ್ಕಿಂತ ಹೆಚ್ಚಿದ್ದು, ಕರ್ನಾಟಕದಲ್ಲಿ ಶೇ.52ರಷ್ಟಿದೆ. ಈ ಸಲ ಸುಧಾರಿಸಬೇಕು ಎಂದರು.
ನೋಡಲ್ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡದೆ ನಿರ್ಲಕ್ಷೃ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಾಮದುರ್ಗ, ಸವದತ್ತಿ ವಲಯ ವ್ಯಾಪ್ತಿಯಲ್ಲಿ ಫಲಿತಾಂಶ ಸುಧಾರಣೆಗೆ ಆದ್ಯತೆ ನೀಡಬೇಕು. ಸಭೆಯಲ್ಲಿ ಕೈಗೊಂಡ ಎಲ್ಲ ಅಂಶಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.ಸಹನಿರ್ದೇಶಕರಾದ ಈಶ್ವರ ನಾಯಕ, ಜಯಶ್ರೀ ಕಾರೇಕರ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಲೀಲಾವತಿ ಹಿರೇಮಠ, ಅಶೋಕಕುಮಾರ ಸಿಂದಗಿ ಇತರರಿದ್ದರು.