ಗೋಕಾಕ ನಗರದಲ್ಲಿ ನಿರ್ಮಾಣಗೊಂಡಿರುವ ಕೆಎಚ್‌ಬಿ ಬಡಾವಣೆ.
ಬೆಳಗಾವಿ :ಗ್ರಾಮೀಣ, ನಗರ ಭಾಗದಲ್ಲಿನ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕಗೃಹ ಮಂಡಳಿ(ಕೆಎಚ್‌ಬಿ) ಜಿಲ್ಲಾಯಾದ್ಯಂತ ನಿರ್ಮಿಸಿರುವ ನೂರಾರು ಸೈಟ್ (ನಿವೇಶನ) ಕೇಳೋರೇ ಇಲ್ಲ!
ಹೌದು. ಕರ್ನಾಟಕಗೃಹ ಮಂಡಳಿಯು ಜಿಲ್ಲಾಯಾದ್ಯಂತ 26 ಬಡಾವಣೆಗಳನ್ನು ನಿರ್ಮಿಸಿದೆ. ಆದರೆ, ಮೂಲಸೌಕರ್ಯ ಕೊರತೆ, ಇ-ಸ್ವತ್ತು ಸಮಸ್ಯೆ,ಜನವಸತಿ ಪ್ರದೇಶದಿಂದ ದೂರದಲ್ಲಿರುವುದು, ಸಾರಿಗೆ ಸಂಪರ್ಕ ಇಲ್ಲದಿರುವುದು, ಸಾಧಾರಣ ಗುಣಮಟ್ಟ ಮುಂತಾದ ಕಾರಣಗಳಿಂದಾಗಿ 900ಕ್ಕೂ ಅಧಿಕ ಸೈಟ್ ಮಾರಾಟವಾಗದೆ ಹಾಗೆ ಉಳಿದುಕೊಂಡಿವೆ. ಮತ್ತೊಂದೆಡೆ ಮಾರಾಟವಾಗಿರುವ ಸೈಟ್‌ಗಳಿಗೆ ಇ-ಸ್ವತ್ತು ಆಗದಿರುವ ಹಿನ್ನೆಲೆ ಮಾಲೀಕರು ಪರದಾಡುತ್ತಿದ್ದಾರೆ.
ಬೆಳಗಾವಿ ಮಹಾನಗರ, ಚಿಕ್ಕೋಡಿ, ಅಥಣಿ, ಸವದತ್ತಿ,ಖಾನಾಪುರ, ಹುಕ್ಕೇರಿ, ನಿಪ್ಪಾಣಿ, ಸಂಕೇಶ್ವರ, ಚ.ಕಿತ್ತೂರು, ಯರಗಟ್ಟಿ ಸೇರಿ ವಿವಿಧ ಭಾಗಗಳಲ್ಲಿ 2010ರಿಂದ 2026ರ ಅವಧಿಯಲ್ಲಿ ಕೆಎಚ್‌ಬಿಯು ನಿರ್ಮಿಸಿರುವ 26 ಬಡಾವಣೆಗಳನ್ನು ನಿರ್ಮಿಸಿ 6,843 ನಿವೇಶನಗಳನ್ನು ಅಭಿವೃದ್ಧಿ ಪಡಿಸಿ 5,937 ಸೈಟ್‌ಗಳನ್ನು ಮಾರಾಟಮಾಡಿದೆ. ಆದರೆ, ಶೇ.60ರಷ್ಟು ಸೈಟ್ ಮಾಲೀಕರು ಮನೆ ಕಟ್ಟಿಕೊಳ್ಳದೆ ಹಾಗೆ ಬಿಟ್ಟಿದ್ದಾರೆ. ಜತೆಗೆ ಕೆಎಚ್‌ಬಿ ಬಡಾವಣೆಗಳಿಂದ ತೆರಿಗೆ ಬಾರದಿರುವ ಹಿನ್ನೆಲೆ ಬಡಾವಣೆ ನಿರ್ವಹಣೆ ಮಾಡುವುದು, ಮೂಲಸೌಕರ್ಯ ಕಲ್ಪಿಸುವುದು ಸ್ಥಳೀಯ ಸಂಸ್ಥೆಗಳಿಗೆ ದೊಡ್ಡ ಸವಾಲಿನ ಕೆಲಸವಾಗಿದೆ.
ಈಗಾಗಲೇ ಕೆೆಎಚ್‌ಬಿ ಬಡಾವಣೆಗಳನ್ನು ಸ್ಥಳೀಯ ಮಟ್ಟದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ,ಪಟ್ಟಣ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿದ್ದು, ಅವುಗಳ ನಿರ್ವಹಣೆ, ಸೌಲಭ್ಯ ಕಲ್ಪಿಸುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಹಸ್ತಾಂತರಗೊಂಡಿರುವ ಬಡಾವಣೆಗಳ ನಿರ್ವಹಣೆ ಪ್ರತ್ಯೇಕ ಅನುದಾನ ನೀಡಲು ನಮ್ಮ ಅವಕಾಶವಿಲ್ಲ ಎಂದು ಗೃಹ ಮಂಡಳಿ ಇಂಜಿನಿಯರ್‌ಗಳು ಹೇಳುತ್ತಿದ್ದಾರೆ. ಇತ್ತ ಸ್ಥಳೀಯ ಸಂಸ್ಥೆಗಳು ಬಡಾವಣೆಗಳು ನಮಗೆ ಹಸ್ತಾಂತರಗೊಂಡಿಲ್ಲ. ಅವುಗಳಿಂದ ಸೂಕ್ತ ತೆರಿಗೆ ಆದಾಯ ಇಲ್ಲದಿರುವ ಕಾರಣ ನಿರ್ವಹಣೆ ಮಾಡುವುದ ಕಷ್ಟ ಎನ್ನುತ್ತಿದ್ದಾರೆ.
ಕೆಎಚ್‌ಬಿ ಬಡಾವಣೆಗಳಿಗೆ ವಿದ್ಯುತ್ ದೀಪ, ಕುಡಿಯುವ ನೀರು, ರಸ್ತೆ, ಚರಂಡಿ, ಸಾರಿಗೆ ಬಸ್ ಸೌಲಭ್ಯ ಸೇರಿ ವಿವಿಧ ಮೂಲಸೌಕರ್ಯ ಕಲ್ಪಿಸಲು ವಿಶೇಷ ಅನುದಾನ ನೀಡಲು ಸರ್ಕಾರಕ್ಕೆ ಮೇಲಿಂದ ಮನವಿ ಸಲ್ಲಿಸಲಾಗುತ್ತಿದೆ. ಆದರೆ, ಇಲ್ಲಿಯವರೆಗೆ ಯಾವುದೇ ರೀತಿಯ ಅನುದಾನ ಬಂದಿಲ್ಲ. ಕೆಲ ಭಾಗದಲ್ಲಿ ರಾಜಕೀಯ ಒತ್ತಡದಿಂದಾಗಿ ಅಭಿವೃದ್ಧಿ ಮಾಡಲಾಗಿದೆ. ಬಹುತೇಕ ಬಡಾವಣೆಗಳಲ್ಲಿ ಅಭಿವೃದ್ಧಿ ಇಲ್ಲದಂತಾಗಿದೆ ಎಂದು ಎಂದು ಬಡಾವಣೆ ನಿವಾಸಿಗಳು ದೂರಿದ್ದಾರೆ.
.................................
ಖಾಲಿ ನಿವೇಶನಗಳಿಗೆ ಬೇಡಿಕೆ ಇಲ್ಲ
ನಗರ ಪ್ರದೇಶಗಳಲ್ಲಿ ಮೂಲಸೌಕರ್ಯ ಒಳಗೊಂಡಿರುವ ನಿವೇಶನಗಳು ಸಾಕಷ್ಟು ಸಂಖ್ಯೆಯಲ್ಲಿರುವ ಕಾರಣ ತಾಲೂಕು, ಪಟ್ಟಣ ದೂರುದಲ್ಲಿರುವ ಕೆಎಚ್‌ಬಿ ನಿವೇಶನ ಕೆಎಚ್‌ಬಿ ನಿವೇಶನಗಳಿಗೆ ಜನರು ನಿರಾಸಕ್ತಿ ತೋರಿದ್ದಾರೆ.ಬಡಾವಣೆಯಲ್ಲಿ ಕೆಲ ಮನೆಗಳು ಮತ್ತು ನಿವೇಶನಗಳನ್ನು ಸಮರ್ಪಕವಾಗಿ ಉಪಯೋಗಿಸದೆ ಇರುವುದರಿಂದಾಗಿ ಇಡೀ ಬಡಾವಣೆ ಇದ್ದೂ ಇಲ್ಲದಂತಾಗಿದೆ. ಹೆಚ್ಚು ಜನರು ವಾಸಿಸುತ್ತಿಲ್ಲ. ನಿವೇಶನ ಖರೀದಿಸಿದವರು ಮನೆಗಳನ್ನು ನಿರ್ಮಿಸುತ್ತಿಲ್ಲ. ಹೀಗಾಗಿ ಬೇಡಿಕೆ ಕಡಿಮೆಯಾಗಿದೆ ಎಂದು ಕೆಎಚ್‌ಬಿ ಇಂಜಿನಿಯರ್‌ಗಳು ತಿಳಿಸಿದ್ದಾರೆ.
ಕೆಎಚ್‌ಬಿಯಲ್ಲಿ ಖಾಲಿ ಸೈಟ್ ವಿವರ
....................................
ಈಗಾಗಲೇ ಜಿಲ್ಲೆಯಲ್ಲಿರುವ ಕೆಎಚ್‌ಬಿ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಅವಶ್ಯಬಿದ್ದರೆ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
- ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ