ಬೆಳಗಾವಿಯ ಬಸವನ ಕುಡಚಿ ಕೆಎಚ್‌ಬಿ ಬಡಾವಣೆ.
ಅದು ಸಾಕಷ್ಟು ಸುಧಾರಣೆಯ ಕನಸುಗಳನ್ನು ಹೊತು ಉದಯಿಸಿದ ಬಡಾವಣೆ. ಆದರೆ, ಅಲ್ಲಿನ ರಸ್ತೆಗಳ ದುಸ್ಥಿತಿಯಿಂದಾಗಿ ನಗರ ಸಾರಿಗೆ ಬಸ್‌ಗಳು ಒಳಬರಲು ಹಿಂದೇಟು ಹಾಕುತ್ತಿದ್ದು, ಹೊರ ಭಾಗದವರೆಗೆ ಮಾತ್ರ ಬಂದು ಹೋಗುತ್ತಿವೆ. ಮನೆಯಿಂದ ಬಸ್ ಹಿಡಿಯಲೆಂದು ನಡೆದು ಬರುವ ಹೆಣ್ಣುಮಕ್ಕಳು, ವಿದ್ಯಾರ್ಥಿನಿಯರನ್ನು ಬೆನ್ನತ್ತುವ ಪುಂಡ-ಪೋಕರಿಗಳ ಸಂಖ್ಯೆ ಹೆಚ್ಚಾಗಿದೆ.
ಇದು ಯಾವುದೋ ಹಿಂದುಳಿದ ಹಳ್ಳಿ ಅಥವಾ ಗುಡ್ಡಗಾಡಿನ ಜನವಸತಿ ಪ್ರದೇಶದ ಸಮಸ್ಯೆ ಅಲ್ಲ. ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಬಸವನಕುಡಚಿ ದೇವರಾಜ ಅರಸು ಬಡಾವಣೆಯ ಗೃಹಮಂಡಳಿ ವಸತಿ ಪ್ರದೇಶ, ಮಹಾಲಕ್ಷ್ಮೀ ನಗರ ಹಾಗೂ ಸುತ್ತಲಿನ ಪ್ರದೇಶಗಳ ನಿತ್ಯದ ಗೋಳು.
ಕರ್ನಾಟಕ ಗೃಹ ಮಂಡಳಿಯಿಂದ ಅಭಿವೃದಿಟಛಿಗೊಂಡ ಈ ಬಡಾವಣೆ ಆರು ವರ್ಷಗಳ ಹಿಂದೆ ಮಹಾನಗರ ಪಾಲಿಕೆಗೆ ಹಸ್ತಾಂತರಗೊಂಡಿದೆ. ಆದರೆ, ಈವರೆಗೆ ಯಾವುದೇ ಅಭಿವೃದ್ಧಿ ಕಾಮಗಾರಿಯಾಗಿಲ್ಲ. ಕೆಎಚ್‌ಬಿ ಲೇಔಟ್ ಮಾಡಿದಾಗ ರಸ್ತೆ, ಗಟಾರು ವ್ಯವಸ್ಥೆ ಇತ್ತು. ಆದರೆ, ಒಳಚರಂಡಿ ವ್ಯವಸ್ಥೆ ಇರಲಿಲ್ಲ. ಗಟಾರುಗಳು ಕಟ್ಟಿಕೊಂಡಿರುವುದರಿಂದ ಮನೆಗಳ ಮುಂದೆಯೇ ಕೊಳಚೆ ತುಂಬಿ ನಿಲ್ಲುತ್ತಿದೆ. ಉದ್ಯಾನಕ್ಕಾಗಿ ಮೀಸಲಿಟ್ಟಿದ್ದ ಜಾಗ ಅಭಿವೃದ್ಧಿಯಾಗಿಲ್ಲ.
ಕುಡಿಯುವ ನೀರು ಮತ್ತು ಕಸ ಸಂಗ್ರಹಣೆ ವಾಹನದ ದರ್ಶನ 8 ದಿನಕ್ಕೊಮ್ಮೆ ಮಾತ್ರ ಎನ್ನುವಂತಾಗಿದೆ. ಬಡಾವಣೆಯಲ್ಲಿನ ಬಹುತೇಕ ಬೀದಿದೀಪಗಳು ಹಾಳಾಗಿದ್ದು, ಸಂಜೆ ಬಳಿಕ ಇಡೀ ಬಡಾವಣೆ ಕತ್ತಲೆಯ ಕೂಪವಾಗುತ್ತದೆ. ಅದರಲ್ಲೂ ರಾತ್ರಿ ಹೊತ್ತಿನಲ್ಲಂತೂ ಪುಂಡ-ಪೋಕರಿಗಳ ಪಾರ್ಟಿ, ಕೂಗಾಟ, ಆರ್ಭಟ ಜೋರಾಗಿರುತ್ತದೆ. ಬೆಳಗಾಗುವಷ್ಟರಲ್ಲಿ ಬೀದಿಗಳಲ್ಲಿ ಮದ್ಯದ ಖಾಲಿ ಬಾಟಲಿಗಳು ಕಣ್ಣಿಗೆ ರಾಚುತ್ತವೆ.
ಪರಿಷತ್‌ನಲ್ಲಿ ಪ್ರತಿಧ್ವನಿಮಾ.10ರಂದು ವಿಧಾನ ಪರಿಷತ್‌ನಲ್ಲಿ ಎಂಎಲ್‌ಸಿ ತಳವಾರ ಸಾಬಣ್ಣ ಮಹಾಲಕ್ಷ್ಮೀ ನಗರಕ್ಕೆ ಮೂಲ ಸೌಕರ್ಯ ಒದಗಿಸುವಂತೆ ನಗರಾಭಿವೃದ್ಧಿ ಸಚಿವರ ಗಮನಸೆಳೆದಿದ್ದಾರೆ. ಬಡಾವಣೆಯಲ್ಲಿ ಯಾರಿಗಾದರೂ ಆರೋಗ್ಯ ಹದಗೆಟ್ಟಲ್ಲಿ ಬೆಳಗಾವಿ ನಗರಕ್ಕೆ ಬರಲು ಪರದಾಡಬೇಕು. ಹೀಗಾಗಿ, ಬಡಾವಣೆ ಹಿಂಭಾಗದಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆ ಅಭಿವೃದ್ಧಿ ಪಡಿಸಲು ಅನುದಾನ ಒದಗಿಸಬೇಕೆಂದು ಕೇಳಿಕೊಂಡಿದ್ದಾರೆ.
ಬಡಾವಣೆಯ ಮಹಾಲಕ್ಷ್ಮೀ ನಗರದ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಇಲ್ಲಿ ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಾವುಗಳಿವೆ. ಬೀದಿದೀಪಗಳಿಲ್ಲದ ಕಾರಣ, ಕಳ್ಳರ ಹಾವಳಿಯೂ ಹೆಚ್ಚಿದೆ. ಮಹಾಲಕ್ಷ್ಮೀ ನಗರದ ಪಕ್ಕದ ಬಯಲನ್ನು ಸ್ಮಶಾನವನ್ನಾಗಿ ಬಳಸಲಾಗುತ್ತಿದ್ದು, ಅದಕ್ಕೆ ಆವರಣ ನಿರ್ಮಿಸಿಲ್ಲ. ಹೀಗಾಗಿ, ಕಂಡ-ಕಂಡಲ್ಲಿ ಶವಸಂಸ್ಕಾರ ನಡೆಸುತ್ತಿದ್ದು, ಜನರು ಭಯದಲ್ಲಿ ಬದುಕುವಂತಾಗಿದೆ. ಈ ಕುರಿತು ಸಾಕಷ್ಟು ಸಲ ಶಾಸಕರು, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಬಡಾವಣೆ ದುಸ್ಥಿತಿ ಕುರಿತು ಸಾಕಷ್ಟು ಸಲ ಮನವಿ ಮಾಡಿಕೊಂಡಿದ್ದೇವೆ. ಲೆಕ್ಕವಿಲ್ಲದಷ್ಟು ಸಲ ಕಚೇರಿಗಳಿಗೆಅಲೆದಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಸೌಕರ್ಯಗಳ ಕೊರತೆ, ವಿಷಜಂತುಗಳ ಹಾವಳಿಯಿಂದ ನೆಂಟರು ನಮ್ಮ ಮನೆಗಳಿಗೆ ಬರಲು ಹೆದರುತ್ತಿದ್ದಾರೆ.