ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ.
ಬೆಳಗಾವಿ : ಹವಾಮಾನಕ್ಕೆ ಹೊಂದಿಕೊಳ್ಳುವ ಮತ್ತು ಬರ ಪರಿಸ್ಥಿತಿಯಲ್ಲೂ ಉತ್ತಮ ಇಳುವರಿ ನೀಡಬಲ್ಲ ಹೊಸ ಕಬ್ಬಿನ ತಳಿ ಸಂಶೋಧನೆ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ದಕ್ಷಿಣ ಭಾರತದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.
ಕರ್ನಾಟಕದ ಸಕ್ಕರೆ ಕ್ಷೇತ್ರದ ಸಂಶೋಧನಾ ಕೇಂದ್ರವಾಗಿ ಗುರುತಿಸಿಕೊಂಡಿರುವ ಸಂಸ್ಥೆ ವ್ಯಾಪ್ತಿಯಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲಬುರಗಿ, ಬೀದರ, ಬಳ್ಳಾರಿ, ಉತ್ತರ ಕನ್ನಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಸಹಕಾರ, ಖಾಸಗಿ ಕ್ಷೇತ್ರದ 66 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆ ಮಾರ್ಗದರ್ಶನದಲ್ಲಿ 5.89 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ಕಬ್ಬು ಬೆಳೆಯುತ್ತಿದ್ದಾರೆ.
ದಕ್ಷಿಣ ಭಾರತದಲ್ಲಿ ಮೊದಲು: ಇಳುವರಿ ಹೆಚ್ಚಳದಿಂದ ಸಕ್ಕರೆ ಕಾರ್ಖಾನೆಗಳ ಆಧುನೀಕರಣದವರೆಗೆ ಹಲವು ಮಹತ್ವದ ಕಾರ್ಯ ಕೈಗೊಂಡಿರುವ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಉತ್ತರ ಕರ್ನಾಟಕದ ಹವಾಮಾನಕ್ಕೆ ಹೊಂದಿಕೊಳ್ಳುವಂತೆ ಕಳೆದ ನಾಲ್ಕು ವರ್ಷಗಳಲ್ಲಿ ಸಂಶೋಧನೆಗಳ ಮೂಲಕ ಹತ್ತಕ್ಕೂ ಅಧಿಕ ಹೊಸ ಕಬ್ಬಿನ ತಳಿ ಪರಿಚಯಿಸಿದೆ. ಅಲ್ಲದೆ, ಬರ ಪರಿಸ್ಥಿತಿಯಲ್ಲೂ ಉತ್ತಮ ಇಳುವರಿ ನೀಡಬಲ್ಲ 35 ಹೊಸ ಕಬ್ಬಿನ ತಳಿಗಳನ್ನು ಸಂಶೋಧಿಸಿ ಪರೀಕ್ಷೆಗೆ ಒಳಪಡಿಸಿದೆ. ಈ ಪ್ರಯತ್ನಗಳು ದಕ್ಷಿಣ ಭಾರತದಲ್ಲಿ ಪ್ರಥಮ ಎನಿಸಿಕೊಂಡಿದ್ದು, ಕಬ್ಬು ಬೆಳೆಗಾರರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ನಿರೀಕ್ಷೆ ಮೂಡಿಸಿವೆ.
ಹೊಸ ಆವಿಷ್ಕಾರ: ಸಕ್ಕರೆ ಉದ್ದಿಮೆ ಸುಧಾರಣೆ ಹಾಗೂ ಕಬ್ಬು ಬೆಳೆಯ ಉತ್ಪಾದನೆ ಹೆಚ್ಚಿಸಲು ಹೊಸ ಆವಿಷ್ಕಾರಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ತಮಿಳುನಾಡಿನ ಕೊಯಮತ್ತೂರನಲ್ಲಿರುವ ಕಬ್ಬು ಸಂವರ್ಧನಾ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಸಕ್ಕರೆ ಹಾಗೂ ಅದಕ್ಕೆ ಸಂಬಂಧಿಸಿದ ಉದ್ದಿಮೆಗೆ ಸಕ್ಕರೆ, ಮದ್ಯಸಾರ, ಕೋ-ಜೆನ್, ಪರಿಸರ ಮಾಲಿನ್ಯ ನಿಯಂತ್ರಣ ಸೇರಿ ವಿವಿಧ ನಿಯತಾಂಕಗಳ ವಿಶ್ಲೇಷಣೆಗೆ ಜೈವಿಕ ಪ್ರಯೋಗಾಲಯ ಸ್ಥಾಪಿಸಿದೆ. ಅಲ್ಲದೆ, ರಾಜ್ಯದಲ್ಲಿ ಪ್ರಥಮವಾಗಿ ಬಿ.ಎಸ್ಸಿ, ಎಂ.ಎಸ್ಸಿ ಸಕ್ಕರೆ ವಿಜ್ಞಾನ ತಂತ್ರಜ್ಞಾನ ಪದವಿ ಕೋರ್ಸ್ ಪ್ರಾರಂಭಿಸಲಾಗಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಸಕ್ಕರೆ ಸಂಸ್ಥೆ ಸಂಶೋಧನಾ ವಿದ್ಯಾರ್ಥಿಗಳಿಗೆ ೆಲೋಶಿಪ್ ಕೂಡ ನೀಡುತ್ತಿದೆ.
ಎಥೆನಾಲ್ ಉತ್ಪಾದನೆ ಮೌಲ್ಯಮಾಪನ
ಕಾರ್ಖಾನೆಗಳು ಎಥೆನಾಲ್ ಉತ್ಪಾದನೆ ಪ್ರಮಾಣ ಮತ್ತು ಕಾರ್ಯವಿಧಾನ ಸರಿಯಾದ ಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಪರಿಶೀಲಿಸಿ ಅದರ ವಿಶ್ಲೇಷಣಾ ವರದಿ ನೀಡುವ ಸಕ್ಕರೆ ಸಂಸ್ಥೆ ಇಲ್ಲಿಯವರೆಗೆ ಕರ್ನಾಟಕ, ತೆಲಂಗಾಣ ಹಾಗೂ ಮಧ್ಯಪ್ರದೇಶದ 50 ಸಕ್ಕರೆ ಕಾರ್ಖಾನೆ ಮತ್ತು ಎಥೆನಾಲ್ ಘಟಕಗಳಿಗೆ ಭೇಟಿ ನೀಡಿ, ಕಾರ್ಯವಿಧಾನ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.