ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ನಿರ್ಮಾಣಗೊಂಡಿರುವ ಹೊಸ ಬಡಾವಣೆ ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ.
ನಗರ, ಗ್ರಾಮೀಣ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಅನಿಯಮಿತವಾಗಿ ತಲೆ ಎತ್ತುತ್ತಿರುವ ಬಡಾವಣೆ ನಿರ್ವಹಣೆ, ಮೂಲಸೌಲಭ್ಯ ಕಲ್ಪಿಸುವುದೇ ನಗರ ಸ್ಥಳೀಯ ಸಂಸ್ಥೆಗಳಿಗೆ, ಗ್ರಾಪಂಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ!
ಹೌದು. ರಾಜ್ಯಾದ್ಯಂತ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2020 ರಿಂದ 20205ರ ನಡುವಿನ ಅವಧಿಯಲ್ಲಿ 200 ರಿಂದ 500 ನಿವೇಶನ ಸಾಮರ್ಥ್ಯ ಹೊಂದಿರುವ ಅಂದಾಜು 4,250 ಹೊಸ ಬಡಾವಣೆ ನಿರ್ಮಾಣಗೊಂಡಿದೆ. ಆದರೆ, ಶೇ.90ರಷ್ಟು ನಿವೇಶನದಲ್ಲಿ ಮನೆ ನಿರ್ಮಾಣಗೊಂಡಿಲ್ಲ. ಇತ್ತ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಕಟ್ಟುತ್ತಿಲ್ಲ. ಜನರು ವಾಸಿಸದಿರುವ ಪರಿಣಾಮ ಬೀದಿ ದೀಪ, ರಸ್ತೆ, ಉದ್ಯಾನವನ, ಚರಂಡಿ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ನೆಲಮಂಗಲ, ತುಮಕೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮೈಸೂರು, ಕಲಬುರಗಿ, ವಿಜಯಪುರ, ಬೀದರ, ದಾವಣಗೆರೆ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ವಿವಿಧ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿ ವರ್ಷ ಶೇ.20ರಷ್ಟು ಹೊಸ ಬಡಾವಣೆ ನಿರ್ಮಾಣ ಆಗುತ್ತಿವೆ. ಆದರೆ, ಬಹುತೇಕ ಕಡೆ ಸಾರ್ವಜನಿಕರು ನಿವೇಶನದ ಮೇಲೆ ಲಕ್ಷಾಂತರ ರೂ. ಹೂಡಿಕೆ ಮಾಡುತ್ತಿದ್ದಾರೆ. ಆದರೆ, ಆ ಬಡಾವಣೆಯಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿಲ್ಲ.
ಕಳೆದ ನಾಲ್ಕೈದು ವರ್ಷದ ಅವಧಿಯಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಲಕ್ಷಾಂತರ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಸರ್ಕಾರಕ್ಕೆ ನಿವೇಶನ ಮಾರಾಟ, ಖರೀದಿ ಮೂಲಕ ತೆರಿಗೆ ಆದಾಯ ಬರುತ್ತಿದೆ. ಆದರೆ, ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಆದಾಯ ಬರುತ್ತಿಲ್ಲ. ಆದರೂ, ಪ್ರತಿ ವರ್ಷವೂ ಹೊಸ ಬಡಾವಣೆಗಳು ಸೇರ್ಪಡೆಯಾಗುತ್ತಿದ್ದು, ಹೊಸ ರಸ್ತೆಗಳಿಗೆ ಬೀದಿ ದೀಪ ಅಳವಡಿಕೆ ಅನಿವಾರ್ಯವಾಗಿದೆ. ಒಂದು ಬಡಾವಣೆ ನಿರ್ವಹಣೆಗೆ ಮಾಸಿಕ ಕನಿಷ್ಠ 50 ರಿಂದ 1ಲಕ್ಷ ರೂ. ವೆಚ್ಚ ಮಾಡಬೇಕು. ಆದರೆ, ಆದಾಯ ಕೊರತೆದಿಂದಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
.....................................
ಸದ್ಯ ರಾಜ್ಯದಲ್ಲಿ ಹೊಸ ಬಡಾವಣೆಗಳ ಸಂಖ್ಯೆ ಹೆಚ್ಚಾದರೂ, ನಿವೇಶನ ದರ ಮಾತ್ರ ಇಳಿಯುತ್ತಿಲ್ಲ. ನಗರ ಸ್ಥಳೀಯ ಸಂಸ್ಥೆ, ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚಿನ ಒಂದು ಚದರ ಮೀಟರ್‌ಗೆ 1,500 ರಿಂದ 4,500 ವರೆಗೆ ದರ ನಿಗದಿಯಾಗಿದ್ದು, 30*40 ಅಳತೆಯ ನಿವೇಶನವೇ 18 ರಿಂದ 35 ಲಕ್ಷ ರೂ.ದರದಲ್ಲಿ ನಿವೇಶನಗಳು ಮಾರಾಟವಾಗುತ್ತಿವೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ಸ್ವಂತ ಮನೆ ಕಟ್ಟುವ ಕನಸು ಇನ್ನಷ್ಟು ದೂರವಾಗುತ್ತಿದೆ.ವಾಣಿಜ್ಯ ಮತ್ತು ಶಿಕ್ಷಣ ಕೇಂದ್ರಗಳಿಗೆ ಸಮೀಪವಿರುವ ಪಟ್ಟಣಗಳಿಗೆ ಗ್ರಾಮೀಣ ಭಾಗದಿಂದ ಬರುವವ ಹೆಚ್ಚಾಗಿದ್ದು, ಬಾಡಿಗೆ ಮನೆಗಳ ದರವೂ ಏರಿಕೆಯಾಗುತ್ತಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳು ತಿಳಿಸಿದ್ದಾರೆ.
..................................
ವಾರ್ಷಿಕ 4.20 ಕೋಟಿ ರೂ. ವಿದ್ಯುತ್ ಬಿಲ್ ಪಾವತಿ!
ಕಳೆದ ನಾಲ್ಕೈದು ವರ್ಷದ ಅವಧಿಯಲ್ಲಿ ಹೊಸದಾಗಿ ನಿರ್ಮಾಣಗೊಂಡು ಪಾಲಿಕೆ, ನಗರಸಭೆ, ಪುರಸಭೆ, ಪಪಂ, ಗ್ರಾಪಂಗೆ ಅಂದಾಜು 3ಸಾವಿರಕ್ಕೂ ಅಧಿಕ ಬಡಾವಣೆ ಹಸ್ತಾಂತರಗೊಂಡಿವೆ. ಪ್ರತಿ ತಿಂಗಳು ಸರಾಸರಿ 4.20 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸುತ್ತಿವೆ. ಕೆಲ ಭಾಗದಲ್ಲಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ವಿದ್ಯುತ್ ಉಳಿತಾಯಕ್ಕೆ ಎಲ್‌ಇಡಿ ದೀಪಗಳ ಅಳವಡಿಕೆ ನಡೆಯುತ್ತಿದರೂ, ಇನ್ನೂ ಅನೇಕ ಪ್ರದೇಶಗಳಲ್ಲಿ ಸೋಡಿಯಂ ವೆಪರ್ ಮತ್ತು ಟ್ಯೂಬ್‌ಲೈಟ್‌ಗಳೇ ಬಳಕೆಯಲ್ಲಿವೆ. ಹೀಗಾಗಿ ವಿದ್ಯುತ್ ಬಿಲ್ ಹೆಚ್ಚಾಗುತ್ತಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
............................
ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಹೊಸ ಬಡಾವಣೆ ನಿರ್ವಹಣೆ ವೆಚ್ಚ ಹೊರೆಯಾಗುತ್ತಿರುವುದು ನಿಜ. ಇದಕ್ಕೆ ಪರ್ಯಾಯ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು.
- ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ
ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಹೊಸ ಬಡಾವಣೆ ನಿರ್ವಹಣೆಗೆ ಪ್ರತ್ಯೇಕ ಅನುದಾನ ಮೀಸಲಿಟ್ಟಿಲ್ಲ. ಹೀಗಾಗಿ ಗ್ರಾಪಂ ಆಡಳಿತಕ್ಕೆ ದೊಡ್ಡ ಹೊರೆಯಾಗುತ್ತಿರುವ ಕುರಿತು ಸದಸ್ಯರು ದೂರಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಾರ್ಯಕ್ರಮ ರೂಪಿಸಲಾಗುವುದು.