ಸಂಕೋನಟ್ಟಿ ಗ್ರಾಮ ಪಂಚಾಯಿತಿ ಕಟ್ಟಡ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಶಿವಾನಂದ ಕಲ್ಲಾಪುರ, ಶಂಕರ ಗಡದೆ, ಸುರೇಶ ಗೂಳಪ್ಪನವರ, ಶಿವಾನಂದ ದಿವಾನಮಳ ಇತರರಿದ್ದರು.
ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ಗ್ರಾಪಂ ಕಟ್ಟಡ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಉತ್ತಮ ಸೇವೆ ಒದಗಿಸಲು ಆಧುನಿಕ ಸೌಕರ್ಯಗಳ ಅಗತ್ಯವಿದೆ. 56 ಸದಸ್ಯರನ್ನು ಹೊಂದಿರುವ ಸಂಕೋನಟ್ಟಿ ಗ್ರಾಪಂ ರಾಜ್ಯದಲ್ಲೇ ದೊಡ್ಡದಾಗಿದೆ ಎಂದರು.
ಕಾರ್ಯಕಲಾಪಗಳು ಹಾಗೂ ಸಾರ್ವಜನಿಕರ ಕೆಲಸಗಳಿಗೂ ಸಮಸ್ಯೆ ಆಗುತ್ತಿರುವುದನ್ನು ಮನಗಂಡು ಹೊಸ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಮಾಡಿಸಲಾಗಿದೆ. ಕಚೇರಿ, ಕೊಠಡಿಗಳು, ಸಭಾಂಗಣ, ಕಡತ ಸಂಗ್ರಹಾಗಾರ ಸೇರಿ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಕೃಪೆಯಿಂದ ಅಥಣಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ತಿಳಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ಮಾತನಾಡಿ, ಕರ ವಸೂಲಿ ಮಾಡಿ ಆರ್ಥಿಕ ಪ್ರಗತಿ ಹೊಂದುವ ಜತೆಗೆ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಶಂಕರ ಗಡದೆ, ಮುಖಂಡರಾದ ಸುರೇಶ ಗೂಳಪ್ಪನವರ, ಶಿವಾನಂದ ದಿವಾನಮಳ, ರಾಮಪ್ಪ ಧರಿಗೌಡರ, ನರಸು ಬಡಕಂಬಿ, ಸದಸ್ಯರಾದ ಸಂಜಯ ಹನಮಾಪುರೆ, ಭರಮು ಸೋನಕರ, ಅರುಣ ಬಾಸಿಂಗೆ, ಪುಟ್ಟು ಶಿಂಧೆ, ಪರಶುರಾಮ ಪೋಳ, ಅಣ್ಣಪ್ಪ ಬಸರಿಕೋಡಿ, ಅಶೋಕ ಕೌಜಲಗಿ, ಅಧಿಕಾರಿಗಳಾದ ಪ್ರವೀಣ ಹುಣಸಿಕಟ್ಟಿ, ಬೀರಪ್ಪ ಕಡಗಂಚಿ, ಕಾರ್ಯದರ್ಶಿ ರಾಜು ಕರಾಂಡೆ, ಸಿಬ್ಬಂದಿ ನಾಗಪ್ಪ ಪಾಟೀಲ ಇತರರಿದ್ದರು.