ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ಡಾ.ಪ್ರಭಾಕರ ಕೋರೆ, ಡಾ.ಎಚ್.ಬಿ.ರಾಜಶೇಖರ, ಡಾ.ರಾಜೇಂದ್ರ ಭಾಂಡನ್ಕರ್, ಪಂ.ರಾಜಾರಾಮ ಅಂಬರ್ಡೇಕರ, ಡಾ.ಸುನೀತಾ ಪಾಟೀಲ, ಡಾ.ದುರ್ಗಾ ನಾಡಕರ್ಣಿ ಇತರರಿದ್ದರು. 
ಬೆಳಗಾವಿ

ಸಂಗೀತದಿಂದ ಕಲೆ, ಸಂಸ್ಕೃತಿ, ಸಂಸ್ಕಾರ ಜೀವಂತ

ಪ್ರಮುಖ ಮುಖ್ಯಾಂಶಗಳು

  • ಕೆಎಲ್‌ಇ ಮ್ಯೂಸಿಕ್ ಶಾಲೆ ಕಾರ್ಯಕ್ಕೆ ಡಾ.ಕೋರೆ ಶ್ಲಾಘನೆ
  • ಆಸ್ಪತ್ರೆಯಲ್ಲಿ ರಾಗಾಲಾಪ
ಬೆಳಗಾವಿ: ಕೆಎಲ್ಇ ಸಂಗೀತ ಶಾಲೆ ಮಕ್ಕಳಲ್ಲಿ ಸಂಗೀತದ ಅಭಿರುಚಿ ಹೆಚ್ಚಿಸಿ, ಸಂಗೀತದ ಮೂಲಕ ಸಂಸ್ಕಾರವನ್ನು ನೀಡಿ ಕಲೆ, ಸಂಸ್ಕೃತಿಗಳನ್ನು ಜೀವಂತಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಶ್ಲಾಘಿಸಿದರು.
ನಗರದ ಕೆಎಲ್ಇ ಸ್ಕೂಲ್ ಆಫ್ ಮ್ಯೂಸಿಕ್ ವತಿಯಿಂದ ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಂಜೆ ಮೆಲೋಡಿ ವರ್ಸಸ್ ಮಲಾಡಿ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ಸಂಗೀತ ಕಲಿತು ನಮ್ಮ ಪರಂಪರೆ, ಸಂಸ್ಕೃತಿಯ ವಾರಸುದಾರರಾಗಬೇಕು. ಈ ನಿಟ್ಟಿನಲ್ಲಿ ಸಂಗೀತ ಶಾಲೆಯ ಮಕ್ಕಳು ಉತ್ತಮವಾಗಿ ಕಲಿಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಗೀತ ನಮ್ಮ ಮನಸ್ಸಿಗೆ ಧೈರ್ಯ ಸಹನೆ ಪ್ರೀತಿ ಹಾಗೂ ನೆಮ್ಮದಿ ಕರುಣಿಸುತ್ತದೆ. ಹೀಗಾಗಿ, ಬಾಲ್ಯಾವಸ್ಥೆಯಲ್ಲಿ ಮಕ್ಕಳಿಗೆ ಸಂಗೀತದ ಅಭ್ಯಾಸ ದೊರೆತಲ್ಲಿ ಭವಿಷ್ಯದಲ್ಲಿ ಉತ್ತಮ ಕಲಾವಿದರು, ಚಿಂತಕರಾಗಲು ಸಾಧ್ಯ. ಸಂಗೀತ ಮನಸ್ಸನ್ನು ಪ್ರಸನ್ನಗೊಳಿಸುತ್ತದೆ. ಆತ್ಮಸ್ಥೈರ್ಯ ತುಂಬುತ್ತದೆ. ಹೀಗಾಗಿ, ನಿರಂತರ ಸಂಗೀತ ಅಭ್ಯಾಸ ಇರಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಗೀತ ಕೋರ್ಸ್‌ನಿಂದ ಬಂದ 30 ಮಕ್ಕಳು ಸಂಗೀತ ಪ್ರದರ್ಶನ ನೀಡಿದರು. ತಬಲಾದಲ್ಲಿ ತೀನತಾಲ್, ಹಾರ್ಮೋನಿಯಂದಲ್ಲಿ ರಾಗ ಮಾಲಾ ನುಡಿಸಿದರು. ಗಾಯನದಲ್ಲಿ ಬಸವಣ್ಣನವರ ವಚನ, ಮರಾಠಿ ನಾಟ್ಯಗೀತೆಗಳು, ಕನ್ನಡ ರಂಗಗೀತೆ, ಭಾವಗೀತೆ, ಜನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.
ಈ ಕಾರ್ಯಕ್ರಮ ಕೆಎಲ್ಇ ಆಸ್ಪತ್ರೆಯ ರೋಗಿಗಳು ಮತ್ತು ಸಿಬ್ಬಂದಿ ಒತ್ತಡ ನಿವಾರಣೆಗೆ ಸಹಕಾರಿಯಾಗುವ ಜತೆ ಸಂತೋಷವನ್ನು ನೀಡಿತು.
ಡಾ.ಸುನೀತಾ ಪಾಟೀಲ, ಡಾ.ದುರ್ಗಾ ನಾಡಕರ್ಣಿ, ಯಾದವೇಂದ್ರ ಪೂಜಾರಿ, ರಾಹುಲ ಮಾಂಡೋಳ್ಕರ, ನಿತಿನ ಸುತಾರ ಮತ್ತು ಸಂಗೀತಾ ಕುಲಕರ್ಣಿ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು. ಸಂಗೀತ ಶಾಲೆ ಸಂಯೋಜಕ ಡಾ.ರಾಜೇಂದ್ರ ಭಾಂಡನ್ಕರ್, ಸಂಗೀತ ಶಾಲೆ ಮುಖ್ಯಸ್ಥ ಪಂ.ರಾಜಾರಾಮ ಅಂಬರ್ಡೇಕರ, ಡಾ.ಎಚ್.ಬಿ. ರಾಜಶೇಖರ, ಶಾಲೆಯ ವಿದ್ಯಾರ್ಥಿಗಳು, ಪಾಲಕರು, ಆಸ್ಪತ್ರೆ ಸಿಬ್ಬಂದಿ ಇದ್ದರು.