ಮಂಗಳೂರು: ಮದ್ಯ ಖರೀದಿಗೆ ಹಣ ಕೊಡದ ವಿವಾದದಲ್ಲಿ ಸ್ನೇಹಿತನನ್ನೇ ಕೊಲೆಗೈದವನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮೂಲತಃ ಬೆಳಗಾವಿಯವನಾಗಿದ್ದು, ಬೈಕಂಪಾಡಿಯಲ್ಲಿ ನೆಲೆಸಿದ್ದ ಪ್ರವೀಣ್ ಶಿವಶಂಕರಪ್ಪ ಕೊಲೆ ಆರೋಪಿ. ಅಸ್ಸಾಂ ಮೂಲದ ಸಚಿನ್‌ಕುಮಾರ್ ಕೊಲೆಯಾದ ವ್ಯಕ್ತಿ.
ಬೈಕಂಪಾಡಿಯಲ್ಲಿ ಸಚಿನ್ ಮತ್ತು ಪ್ರವೀಣ್ ಅಕ್ಕಪಕ್ಕದ ಮನೆಗಳಲ್ಲಿದ್ದು, ಸ್ನೇಹಿತರಾಗಿದ್ದರು. ಭಾನುವಾರ ರಾತ್ರಿ ಮದ್ಯ ಖರೀದಿಸಲೆಂದು ಸಚಿನ್, ಶಿವಶಂಕರಪ್ಪನಲ್ಲಿ ಹಣ ಕೇಳಿದಾಗ ಶಿವಶಂಕರಪ್ಪ ಹಣ ನೀಡದೆ ವಾಪಸ್ ಕಳುಹಿಸಿದ್ದನು. ಆದರೂ ಹಣ ಹೊಂದಿಸಿ ತಡರಾತ್ರಿ ಕಂಠಪೂರ್ತಿ ಕುಡಿದು ಬಂದ ಸಚಿನ್‌ಕುಮಾರ್, ಶಿವಂಕರಪ್ಪನ ಮನೆ ಬಳಿ ಬಂದು ಆತನ ತಂದೆ-ತಾಯಿಯನ್ನು ನಿಂದಿಸಿದ್ದಾನೆ.
ಇದರಿಂದ ಆಕ್ರೋಶಗೊಂಡ ಶಿವಶಂಕರಪ್ಪ ಚಾಕುವಿನಿಂದ ಸಚಿನ್‌ನ ಕುತ್ತಿಗೆಗೆ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದನು. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪಣಂಬೂರು ಇನ್‌ಸ್ಪೆಕ್ಟರ್ ಸಲೀಂ ಅಬ್ಬಾಸ್ ನೇತೃತ್ವದ ತಂಡ ತ್ವರಿತ ಕಾರ್ಯಾಚರಣೆ ನಡೆಸಿ, ಒಂದು ತಾಸಿನೊಳಗೆ ಆತನನ್ನು ರೈಲು ನಿಲ್ದಾಣದಲ್ಲಿ ಪತ್ತೆ ಮಾಡಿ ಬಂಧಿಸಿತ್ತು.